ಅಂಬೇಡ್ಕರ್ ಅವರಿಗೆ ದಶಕಗಳ ಕಾಲ ‘ಭಾರತ ರತ್ನ’ ನೀಡಲು ಕಾಂಗ್ರೆಸ್ ನಿರಾಕರಿಸಿತ್ತು: ಪ್ರಧಾನಿ ಮೋದಿ

Update: 2023-11-12 09:24 GMT

ಪ್ರಧಾನಿ ನರೇಂದ್ರ ಮೋದಿ (PTI)

ಹೈದರಾಬಾದ್: ಅಂಬೇಡ್ಕರ್ ಅವರಿಗೆ ದಶಕಗಳ ಕಾಲ ಭಾರತ ರತ್ನವನ್ನು ನೀಡಲು ಕಾಂಗ್ರೆಸ್ ನಿರಾಕರಿಸಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಶನಿವಾರ ಹೈದರಾಬಾದ್ ನಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿಗಳ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರಿಗೆ ಚುನಾವಣೆಗಳಲ್ಲಿ ಗೆಲ್ಲಲು ಅವಕಾಶ ನೀಡಿರಲಿಲ್ಲವೆಂದೂ ದೂರಿದರು ಎಂದು indiatoday.in ವರದಿ ಮಾಡಿದೆ.

“ಈ ಕಾಂಗ್ರೆಸ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಚುನಾವಣೆಯಲ್ಲಿ ಗೆಲ್ಲಲು ಎರಡು ಬಾರಿ ಅವಕಾಶ ನೀಡಲಿಲ್ಲ. ಹಲವಾರು ದಶಕಗಳ ಕಾಲ ಹಳೆಯ ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ಅವರ ಭಾವಚಿತ್ರವನ್ನು ಹಾಕಲು ಆಸ್ಪದ ನೀಡಿರಲಿಲ್ಲ. ಕಾಂಗ್ರೆಸ್ ನಿಂದಾಗಿ ಅವರಿಗೆ ದಶಕಗಳ ಕಾಲ ‘ಭಾರತ ರತ್ನ’ ಪ್ರದಾನ ಮಾಡಲಾಗಿರಲಿಲ್ಲ” ಎಂದು ಅವರು ಆರೋಪಿಸಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ಸರ್ಕಾರ ಅಧಿಕಾರಕ್ಕೆ ಬಂದ ನಂತರವಷ್ಟೆ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ಭಾರತ ರತ್ನವನ್ನು ಪ್ರದಾನ ಮಾಡಲಾಯಿತು ಎಂದು ಅವರು ಪ್ರತಿಪಾದಿಸಿದ್ದಾರೆ.

1990ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದ ವಿ.ಪಿ.ಸಿಂಗ್ ನೇತೃತ್ವದ ರಾಷ್ಟ್ರೀಯ ರಂಗ ಸರ್ಕಾರವು ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತ ರತ್ನ ಪುರಸ್ಕಾರವನ್ನು ಪ್ರದಾನ ಮಾಡಿತ್ತು.

ನವೆಂಬರ್ 30ರಂದು ತೆಲಂಗಾಣ ವಿಧಾನಸಭೆಗೆ ನಡೆಯಲಿರುವ ಚುನಾವಣೆಯ ಫಲಿತಾಂಶವನ್ನು ನಿರ್ಣಯಿಸುವಲ್ಲಿ ದಲಿತ ಮತದಾರರು ನಿರ್ಣಾಯಕರಾಗಿದ್ದು, ದಲಿತ ಮತಗಳನ್ನು ಬಿಜೆಪಿಯತ್ತ ಸೆಳೆಯಲು ಪ್ರಧಾನಿ ಮೋದಿ ಅಂಬೇಡ್ಕರ್ ಅವರ ಪ್ರಸ್ತಾಪ ಮಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News