ಕಾಂಗ್ರೆಸ್ ಗೆ 1,745 ಕೋಟಿ ರೂ.ಗಳ ಮತ್ತೊಂದು ಆದಾಯ ತೆರಿಗೆ ನೋಟಿಸ್; ಒಟ್ಟು ತೆರಿಗೆ ಬೇಡಿಕೆ 3,567 ಕೋಟಿ ರೂ.ಗೇರಿಕೆ

Update: 2024-03-31 12:19 GMT

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯು ಬೇತಾಳದಂತೆ ಕಾಂಗ್ರೆಸ್ ನ ಬೆನ್ನು ಬಿದ್ದಿದ್ದು, ಪಕ್ಷದ ಸಂಕಷ್ಟ ಇನ್ನಷ್ಟು ಹೆಚ್ಚಿದೆ. 2014-15 ರಿಂದ 2016-17ರವರೆಗಿನ ಮೌಲ್ಯಮಾಪನ ವರ್ಷಗಳಿಗೆ 1,745 ಕೋಟಿ ರೂ.ಗಳ ತೆರಿಗೆಯನ್ನು ಪಾವತಿಸುವಂತೆ ಅದಾಯ ತೆರಿಗೆ ಇಲಾಖೆಯಿಂದ ಹೊಸ ನೋಟಿಸ್ ಗಳನ್ನು ತಾನು ಸ್ವೀಕರಿಸಿರುವುದಾಗಿ ಕಾಂಗ್ರೆಸ್ ಹೇಳಿದೆ. ಈ ನೋಟಿಸ್ ನೊಂದಿಗೆ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್ ನಿಂದ ಒಟ್ಟು ತೆರಿಗೆ ಬಾಕಿಯನ್ನು 3,567 ಕೋಟಿ ರೂ.ಗೆ ಏರಿಸಿದೆ.

ಪಕ್ಷದೊಳಗಿನ ಮೂಲಗಳು ತಿಳಿಸಿರುವಂತೆ ಹೊಸ ತೆರಿಗೆ ನೋಟಿಸ್ ಗಳು 2014-15 (663 ಕೋಟಿ ರೂ.),2015-16 (ಸುಮಾರು 664 ಕೋಟಿ ರೂ.) ಮತ್ತು 2016-17 (ಸುಮಾರು 417 ಕೋಟಿ ರೂ.) ನೇ ಸಾಲುಗಳಿಗೆ ಸಂಬಂಧಿಸಿವೆ. ರಾಜಕೀಯ ಪಕ್ಷಗಳಿಗೆ ಸಿಗುತ್ತಿದ್ದ ತೆರಿಗೆ ವಿನಾಯತಿಯನ್ನು ಅಧಿಕಾರಿಗಳು ಕೊನೆಗೊಳಿಸಿದ್ದು, ಸಂಪೂರ್ಣ ದೇಣಿಗೆ ಸಂಗ್ರಹಕ್ಕಾಗಿ ಕಾಂಗ್ರೆಸ್ ಗೆ ತೆರಿಗೆಯನ್ನು ವಿಧಿಸಿದ್ದಾರೆ.

ತನಿಖಾ ಸಂಸ್ಥೆಗಳ ದಾಳಿಗಳ ಸಂದರ್ಭದಲ್ಲಿ ಪಕ್ಷದ ಕೆಲವು ನಾಯಕರಿಂದ ವಶಪಡಿಸಿಕೊಳ್ಳಲಾಗಿದ್ದ ಡೈರಿಗಳಲ್ಲಿಯ ‘ಥರ್ಡ್ ಪಾರ್ಟಿ ಎಂಟ್ರಿ’ಗಳಿಗಾಗಿಯೂ ಕಾಂಗ್ರೆಸ್ ಗೆ ತೆರಿಗೆಯನ್ನು ವಿಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸುಮಾರು 1,823 ಕೋಟಿ ರೂ.ಗಳನ್ನು ಪಾವತಿಸುವಂತೆ ತನಗೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿದೆ ಎಂದು ಕಾಂಗ್ರೆಸ್ ಮಾ.29ರಂದು ತಿಳಿಸಿತ್ತು. ಹಿಂದಿನ ವರ್ಷಗಳಿಗೆ ಸಂಬಂಧಿಸಿದ ತೆರಿಗೆ ಬೇಡಿಕೆಗಾಗಿ ತೆರಿಗೆ ಅಧಿಕಾರಿಗಳು ಈಗಾಗಲೇ ಪಕ್ಷದ ಖಾತೆಗಳಿಂದ 135 ಕೋಟಿ ರೂ.ಗಳನ್ನು ಜಮಾ ಮಾಡಿಕೊಂಡಿದ್ದಾರೆ.

135 ಕೋಟಿ ರೂ.ಗಳ ತೆರಿಗೆ ಬೇಡಿಕೆಯ ವಿರುದ್ಧ ಕಾಂಗ್ರೆಸ್ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದು, ಪ್ರಕರಣವು ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಇತರ ಡೈರಿಗಳಲ್ಲಿಯ ಬಿಜೆಪಿ ನಾಯಕರನ್ನು ಹೆಸರಿಸಿದ್ದ ಇಂತಹುದೇ ಥರ್ಡ್ ಪಾರ್ಟಿ ಎಂಟ್ರಿಗಳಿಗಾಗಿ ಯಾವುದೇ ತೆರಿಗೆಯನ್ನು ವಿಧಿಸಲಾಗಿಲ್ಲ ಎಂದು ಕಾಂಗ್ರೆಸ್ ನಾಯಕರು ವಾದಿಸಿದ್ದಾರೆ. ಬಿಜೆಪಿಯು ತೆರಿಗೆ ಭಯೋತ್ಪಾದನೆಯಲ್ಲಿ ತೊಡಗಿದೆ ಮತ್ತು 2024ರ ಲೋಕಸಭಾ ಚುನಾವಣೆಗಳಿಗೆ ಮುನ್ನ ಪಕ್ಷವನ್ನು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News