ಇಂಡಿಯಾ ಮೈತ್ರಿಕೂಟ | ಕಾಂಗ್ರೆಸ್ ತನ್ನ ಸ್ಥಾನ ಪಡೆದುಕೊಳ್ಳಬೇಕೇ ಹೊರತು, ಎಲ್ಲವನ್ನೂ ಕೈವಶ ಮಾಡಿಕೊಳ್ಳಬಾರದು : ಉಮರ್ ಅಬ್ದುಲ್ಲ ಎಚ್ಚರಿಕೆ

Update: 2024-12-14 20:22 IST
Omar Abdullah

 ಉಮರ್ ಅಬ್ದುಲ್ಲ | PC : PTI

  • whatsapp icon

ಹೊಸದಿಲ್ಲಿ : ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್ ತನ್ನ ನಾಯಕತ್ವವನ್ನು ಸಮರ್ಥನೆ ಮಾಡಿಕೊಳ್ಳಬೇಕೇ ಹೊರತು, ಎಲ್ಲವನ್ನೂ ಕೈವಶ ಮಾಡಿಕೊಳ್ಳಬಾರದು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಹೇಳುವ ಮೂಲಕ, ಇಂಡಿಯಾ ಮೈತ್ರಿಕೂಟದಲ್ಲಿ ಬೆಳೆಯುತ್ತಿರುವ ಅಸಮಾಧಾನಕ್ಕೆ ಒಪ್ಪಿಗೆ ಮುದ್ರೆ ಒತ್ತಿದ್ದಾರೆ.

ಕಾಂಗ್ರೆಸ್ ಅಖಿಲ ಭಾರತ ವ್ಯಾಪ್ತಿ ಹೊಂದಿರುವ ಗಮನಾರ್ಹ ಪಕ್ಷವಾಗಿದ್ದು, ಲೋಕಸಭೆಯಲ್ಲಿ ಅತಿ ದೊಡ್ಡ ವಿರೋಧ ಪಕ್ಷವಾಗಿದೆ ಎಂಬ ಸಂಗತಿಯನ್ನು ಒಪ್ಪಿಕೊಂಡ ಅವರು, ನಾಯಕತ್ವವನ್ನು ಗಳಿಸಬೇಕೇ ಹೊರತು ಕಿತ್ತುಕೊಳ್ಳಬಾರದು ಎಂದು ಕಿವಿ ಮಾತು ಹೇಳಿದರು. ಇದರೊಂದಿಗೆ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಬೇಕು ಎಂಬ ವಿಷಯವನ್ನು ಕಾಂಗ್ರೆಸ್ ಲೋಕಸಭೆಯಲ್ಲಿ ಪ್ರಸ್ತಾಪಿಸಬೇಕು ಎಂದೂ ಸಲಹೆ ನೀಡಿದರು.

ಅಕ್ಟೊಬರ್ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ಇದೇ ಪ್ರಥಮ ಬಾರಿಗೆ PTI ಸುದ್ದಿ ಸಂಸ್ಥೆಗೆ ಸಂದರ್ಶನ ನೀಡಿರುವ ಉಮರ್ ಅಬ್ದುಲ್ಲಾ, "ಲೋಕಸಭೆಯಲ್ಲಿ ಅತಿ ದೊಡ್ಡ ವಿರೋಧ ಪಕ್ಷವಾಗುವ ಮೂಲಕ ಹಾಗೂ ದೇಶಾದ್ಯಂತ ಅಸ್ತಿತ್ವ ಹೊಂದಿರುವ ಪಕ್ಷವಾಗಿ ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ತನ್ನ ನಾಯಕತ್ವ ಹೊಂದಿರುವ ಕಾಂಗ್ರೆಸ್, ಸಹಜವಾಗಿಯೇ ವಿರೋಧ ಪಕ್ಷಗಳ ಹೋರಾಟದ ನಾಯಕತ್ವ ಗಳಿಸಿದೆ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ, ತಮಗೆ ದೊರೆತಿರುವ ನಾಯಕತ್ವವನ್ನು ಸಮರ್ಥಿಸುವಂತೆ ಅಥವಾ ಗಳಿಸುವಂತೆ ಅಥವಾ ಕಾಪಿಟ್ಟುಕೊಳ್ಳುವಂತೆ ಕಾಂಗ್ರೆಸ್ ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂಬ ಅಸಮಾಧಾನ ಇಂಡಿಯಾ ಮೈತ್ರಿಕೂಟದ ಕೆಲ ಪಕ್ಷಗಳಲ್ಲಿ ಮೂಡಿದೆ ಎಂದೂ ಅವರು ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News