ಹಿಂದಿ ಸಿನಿಮಾದ ಥರ್ಡ್ ಕ್ಲಾಸ್ ವಿಲನ್ ನಂತೆ ಮಾತನಾಡಬೇಡಿ : ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ಪವನ್ ಖೇರಾ ವಾಗ್ದಾಳಿ
ಹೊಸ ದಿಲ್ಲಿ: ಹಿಂದಿ ಸಿನಿಮಾದ ಥರ್ಡ್ ಕ್ಲಾಸ್ ವಿಲನ್ ನಂತೆ ಮಾತನಾಡಬೇಡಿ. ಅದು ನಿಮ್ಮ ಘನತೆಗೆ ತಕ್ಕುದಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ, ಪ್ರಧಾನಿ ಮೋದಿ ತಮ್ಮ ವೈಯಕ್ತಿಕ ಗೌರವವನ್ನು ಕಳೆದುಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಕನಿಷ್ಠ ಪಕ್ಷ ನೀವು ಹೊಂದಿರುವ ಹುದ್ದೆಯ ಗೌರವ ಮತ್ತು ಘನತೆಯನ್ನು ಕಾಪಾಡಿ” ಎಂದೂ ಅವರು ಕಿವಿಮಾತು ಹೇಳಿದ್ದಾರೆ.
ಈ ಕುರಿತು ಮಂಗಳವಾರ ಎಕ್ಸ್ ನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಪವನ್ ಖೇರಾ, ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಚರ್ಚೆಯ ಮಟ್ಟವನ್ನು ಕೆಳ ಹಂತಕ್ಕೆ ಕೊಂಡೊಯ್ಯತ್ತಿದ್ದು, ಇದು ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತಿರುವುದನ್ನು ಸೂಚಿಸುತ್ತಿದೆ ಎಂದು ಆರೋಪಿಸಿದ್ದಾರೆ.
ತಮ್ಮ ಚುನಾವಣಾ ಪ್ರಚಾರದಲ್ಲಿ ಇಂಡಿಯಾ ಮೈತ್ರಿಕೂಟವು ನಿಮ್ಮ ಮಂಗಳ ಸೂತ್ರಗಳನ್ನು ಕಸಿದುಕೊಳ್ಳಲಿದೆ ಎಂದು ಮಹಿಳಾ ಮತದಾರರನ್ನುದ್ದೇಶಿಸಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ, ಮುಂದುವರಿದು ಇಂಡಿಯಾ ಮೈತ್ರಿಕೂಟವನ್ನು ನುಸುಳುಕೋರರ ಮೈತ್ರಿಕೂಟ ಎಂದೂ ಟೀಕಿಸಿದ್ದರು. ಮಹಾರಾಷ್ಟ್ರ ಮತ್ತು ಜಾರ್ಖಂಡ್ ನಲ್ಲಿ ಈ ಮೈತ್ರಿಕೂಟವು ಪುತ್ರಿಯರು ಹಾಗೂ ಆಹಾರವನ್ನು ಕಸಿದುಕೊಳ್ಳಲಿದೆ ಎಂದೂ ಆರೋಪಿಸಿದ್ದರು ಎಂದು ಅವರು ದೂರಿದ್ದಾರೆ.
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ಆಕಳು, ಮಾಂಸ, ಮೀನು, ಮಂಗಳಸೂತ್ರ ಹಾಗೂ ಮುಸ್ಲಿಂ ಹೆಸರಿನಲ್ಲಿ ಮತಯಾಚನೆ ಪ್ರಾರಂಭಿಸಿದ್ದರು. ಇದೀಗ ಜಾರ್ಖಂಡ್ ಚುನಾವಣೆಯ ವೇಳೆಗೆ ಪುತ್ರಿಯರು ಹಾಗೂ ರೊಟ್ಟಿಯ ಮಟ್ಟಕ್ಕೆ ತಲುಪಿದ್ದಾರೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಜಾರ್ಖಂಡ್ ನಲ್ಲಿ ನುಸುಳುಕೋರರು ಮುಕ್ತವಾಗಿ ತಿರುಗುತ್ತಿದ್ದಾರೆ ಎಂಬ ಹೇಳಿಕೆಯ ಮೂಲಕ ಪ್ರಧಾನಿ ಮೋದಿಯೇನಾದರೂ ಗೃಹ ಸಚಿವ ಅಮಿತ್ ಶಾರ ಕೆಲಸವನ್ನು ಟೀಕಿಸುತ್ತಿದ್ದಾರೆಯೆ ಎಂದೂ ಅವರು ಲೇವಡಿ ಮಾಡಿದ್ದಾರೆ.
“ಪ್ರಧಾನಿಯ ಚುನಾವಣಾ ಪ್ರಚಾರದ ಭಾಷೆಯು ಕ್ಷಿಪ್ರವಾಗಿ ಕೆಳ ಮಟ್ಟಕ್ಕೆ ಕುಸಿಯುತ್ತಿದೆ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಸೋಲಿನ ಭೀತಿಯಿಂದ ಸಮುದಾಯಗಳ ನಡುವೆ ವಿಷವನ್ನು ಕಕ್ಕುವ ಮೂಲಕ ಸಮಾಜವನ್ನು ವಿಭಜಿಸಲು ಪ್ರಯತ್ನಿಸಿದ್ದರು. ಆದರೂ, ಅವರಿಗೆ ಹೆಚ್ಚು ಮತಗಳು ದೊರೆತಿರಲಿಲ್ಲ. ಇದೀಗ ಅವರು ಸಮ್ಮಿಶ್ರ ಸರಕಾರವನ್ನು ನಡೆಸುತ್ತಿದ್ದಾರೆ” ಎಂದು ಪವನ್ ಖೇರಾ ಕಟಕಿಯಾಡಿದ್ದಾರೆ.
ಇದಕ್ಕೂ ಮುನ್ನ, ಜಾರ್ಖಂಡ್ ನಲ್ಲಿ ತಮ್ಮ ಪ್ರಥಮ ಚುನಾವಣಾ ಪ್ರಚಾರ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ನುಸುಳುಕೋರ ಬಾಂಗ್ಲಾದೇಶಿಗರಿಗೆ ನೆರವು ನೀಡಲು ನುಸುಳುಕೋರರ ಮೈತ್ರಿ ಏರ್ಪಟ್ಟಿದೆ ಎಂದು ಜೆಎಂಎಂ ನೇತೃತ್ವದ ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
ನವೆಂಬರ್ 13 ಹಾಗೂ ನವೆಂಬರ್ 20ರಂದು ಎರಡು ಹಂತದಲ್ಲಿ ಜಾರ್ಖಂಡ್ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23ರಂದು ಮತ ಎಣಿಕೆ ನಡೆಯಲಿದೆ.