ಅಮಿತ್ ಶಾ, ಹಿಮಂತ ಬಿಸ್ವ ಶರ್ಮಾ ವಿರುದ್ಧ ಚುನಾವಣಾ ಆಯುಕ್ತರಿಗೆ ಕಾಂಗ್ರೆಸ್‌ ದೂರು

Update: 2023-10-26 10:11 GMT

ಅಮಿತ್ ಶಾ (PTI)

ಹೊಸದಿಲ್ಲಿ: ಹಿರಿಯ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರ ನಿಯೋಗವೊಂದು ಬುಧವಾರ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಮತ್ತು ಇತರ ಚುನಾವಣಾಧಿಕಾರಿಗಳನ್ನು ಭೇಟಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಇತರ ಬಿಜೆಪಿ ನಾಯಕರ ವಿರುದ್ಧ ದೂರುಗಳ ಪಟ್ಟಿಯನ್ನು ಸಲ್ಲಿಸಿದ್ದಾರೆ. ಈ ಬಿಜೆಪಿ ನಾಯಕರು ವಿಭಜನಾತ್ಮಕ ವಿಚಾರಗಳನ್ನು ಎತ್ತುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಲ್ಮಾನ್‌ ಖುರ್ಷಿದ್‌, ಮಾಣಿಕ್‌ರಾವ್‌ ಠಾಕ್ರೆ, ರೇವನಾಥ್‌ ರೆಡ್ಡಿ, ಉತ್ತಮ್‌ ಕುಮಾರ್‌ ರೆಡ್ಡಿ, ಭಟ್ಟಿ ವಿಕ್ರಮಾರ್ಕ ಮುಂತಾದ ಹಿರಿಯ ಕಾಂಗ್ರೆಸ್‌ ನಾಯಕರು ನಿಯೋಗದಲ್ಲಿದ್ದರು.

“ಭೂಪೇಶ್‌ ಬಘೇಲ್‌ ಸರ್ಕಾರವು ಓಲೈಕೆ ರಾಜಕಾರಣ ಮತ್ತು ಮತ ಬ್ಯಾಂಕ್‌ ರಾಜಕಾರಣ ಮಾಡುತ್ತಿದೆ, ಛತ್ತೀಸಗಢದ ಸರ್ಕಾರ ಪುತ್ರ ಭುನೇಶ್ವರ್‌ ಸಾಹೂವನ್ನು ಹತ್ಯೆ ಮಾಡಿಸಿದೆ,” ಎಂದು ಕೇಂದ್ರ ಗೃಹ ಸಚಿವರು ಆರೋಪಿಸಿದ್ದೇ ಅಲ್ಲದೆ “ಬಿಜೆಪಿಯು ಭುವನೇಶ್ವರ್‌ ಸಾಹೂ ಹಂತಕರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತದೆ ಮತ್ತು ಅವರ ಗೌರವಾರ್ಥ ಅವರ ತಂದೆ ಈಶ್ವರ್‌ ಸಾಹೂ ಅನ್ನು ಚುನಾವಣೆಗೆ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತಿದೆ,” ಎಂದು ಅಮಿತ್ ಶಾ ಹೇಳಿದ್ಧಾರೆಂದು ದೂರಿನಲ್ಲಿ ತಿಳಿಸಲಾಗಿದೆ.

ಗೃಹ ಸಚಿವರ ಹೇಳಿಕೆಯು ಐಪಿಸಿ ಹಾಗೂ ಜನ ಪ್ರತಿನಿಧಿತ್ವ ಕಾಯಿದೆ 1951 ಇದರ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ಕಾಂಗ್ರೆಸ್‌ ನಾಯಕ ಮುಹಮ್ಮದ್‌ ಅಕ್ಬರ್‌ ವಿರುದ್ಧದ ಪ್ರಚಾರದಲ್ಲಿ “ಒಬ್ಬ ಅಕ್ಬರ್‌ ಒಂದು ಜಾಗಕ್ಕೆ ಬಂದರೆ, ಆತ 100 ಅಕ್ಬರರನ್ನು ಕರೆಯುತ್ತಾನೆ. ಆದ್ದರಿಂದ ಅವರನ್ನು ಆದಷ್ಟು ಬೇಗ ವಾಪಸ್‌ ಕಳಿಸಿ, ಇಲ್ಲದೇ ಹೋದಲ್ಲಿ ಮಾತೆ ಕೌಶಲ್ಯಳ ಭೂಮಿ ಅಪವಿತ್ರವಾಗಲಿದೆ,” ಎಂದು ಕಾಂಗ್ರೆಸ್‌ ತನ್ನ ದೂರಿನಲ್ಲಿ ಹೇಳಿದೆ.

ಛತ್ತೀಸಗಢ ಸರ್ಕಾರವು ಆದಿವಾಸಿಗಳಿಗೆ ಬೇರೆ ಧರ್ಮಕ್ಕೆ ಮತಾಂತರಗೊಳ್ಳಲು ಪ್ರತಿದಿನ ಪ್ರೇರೇಪಿಸುತ್ತಿದೆ ಎಂದು ಸರ್ಮ ಆರೋಪಿಸಿದ್ದಾರೆ ಎಂದೂ ಕಾಂಗ್ರೆಸ್‌ ದೂರಿನಲ್ಲಿ ಹೇಳಿದೆ ಹಾಗೂ ಸಿಎಂ ಹೇಳಿಕೆಯು ಒಂದು ಸಮುದಾಯವನ್ನು ಇನ್ನೊಂದು ಸಮುದಾಯಕ್ಕೆದುರಾಗಿ ಎತ್ತಿ ಕಟ್ಟುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News