ಕಾಂಗ್ರೆಸ್ 50 ಸ್ಥಾನಗಳ ಗಡಿ ದಾಟಲು ಪ್ರಯಾಸಪಡಲಿದೆ : ಪ್ರಧಾನಿ ಮೋದಿ

Update: 2024-05-03 14:22 GMT

ನರೇಂದ್ರ ಮೋದಿ , ರಾಹುಲ್ ಗಾಂಧಿ | PC : PTI  

ಬರ್ಧಮನ್ (ಪಶ್ಚಿಮ ಬಂಗಾಳ) : ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷವು ಅರ್ಧ ಶತಕದ ಗಡಿ ದಾಟಲೂ ಪ್ರಯಾಸ ಪಡಲಿದ್ದು, ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಅದರ ಸ್ಥಾನಗಳ ಸಂಖ್ಯೆ ಕನಿಷ್ಠ ಪ್ರಮಾಣಕ್ಕೆ ಕುಸಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.   

ಉತ್ತರ ಪ್ರದೇಶದ ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ರಾಹುಲ್ ಗಾಂಧಿ ನಿರ್ಧಾರವನ್ನೂ ಗೇಲಿ ಮಾಡಿದ ಪ್ರಧಾನಿ ಮೋದಿ, ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಳ್ಳುವ ಸುಳಿವು ದೊರೆತಿರುವುದರಿಂದ ಅವರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು. ರಾಹುಲ್ ಗಾಂಧಿ ವಯನಾಡ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ.

ಬರ್ಧಮನ್-ದುರ್ಗಾಪುರ್, ಕೃಷ್ಣಾನಗರ್ ಹಾಗೂ ಬೋಲ್‌ಪುರ್ ಲೋಕಸಭಾ ಕ್ಷೇತ್ರಗಳಲ್ಲಿ ಆಯೋಜಿಸಲಾಗಿದ್ದ ಸರಣಿ ಚುನಾವಣಾ ಸಮಾವೇಶಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತನ್ನ ಜಿಹಾದಿ ಮತ ಬ್ಯಾಂಕ್‌ನ ತುಷ್ಟೀಕರಣ ರಾಜಕಾರಣವನ್ನು ಮುಂದುವರಿಸಲು ಪರಿಶಿಷ್ಟ ಜಾತಿ, ದಲಿತರು ಹಾಗೂ ಇತರೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಅವರಿಗೆ ನೀಡಲಿದೆ ಎಂದು ಆರೋಪಿಸಿದರು.

ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿಯೊಬ್ಬರು ನೀಡಿರುವ ಮತ ಜಿಹಾದ್ ಹೇಳಿಕೆಗಾಗಿ ಇಂಡಿಯಾ ಮೈತ್ರಿ ಕೂಟ ಹಾಗೂ ಕಾಂಗ್ರೆಸ್ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

"ನಾನು ಲೋಕಸಭೆಯಲ್ಲಿ ಬಹಳ ಹಿಂದೆಯೇ ಕಾಂಗ್ರೆಸ್ ಸೋಲಿನ ಬಗ್ಗೆ ಭವಿಷ್ಯ ನುಡಿದಿರುವುದರಿಂದ ಜನಾಭಿಪ್ರಾಯ ಅಥವಾ ಮತದಾನೋತ್ತರ ಸಮೀಕ್ಷೆಯ ಯಾವುದೇ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿಯು ಲೋಕಸಭಾ ಸ್ಥಾನವನ್ನು ತೊರೆದು ರಾಜ್ಯಸಭೆಯನ್ನು ಪ್ರವೇಶಿಸಿದ್ದೇ ಈ ಮಾತಿಗೆ ಸಾಕ್ಷಿ" ಎಂದು ಪರೋಕ್ಷವಾಗಿ ಸೋನಿಯಾ ಗಾಂಧಿಯನ್ನು ಕುಟುಕಿದರು.

"ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಪರಾಭವಗೊಂಡು ವಯನಾಡ್ ಕ್ಷೇತ್ರಕ್ಕೆ ತೆರಳಿದ್ದ ಕಾಂಗ್ರೆಸ್ ಪಕ್ಷದ ರಾಜಕುಮಾರ, ಈಗ ರಾಯ್ ಬರೇಲಿ ಕ್ಷೇತ್ರದಿಂದಲೂ ಸ್ಪರ್ಧಿಸುತ್ತಿದ್ದಾರೆ. ಆತನಿಗೆ ತಾನು ವಯನಾಡ್ ಕ್ಷೇತ್ರದಲ್ಲಿ ಪರಾಭವಗೊಳ್ಳಲಿದ್ದೇನೆ ಎಂಬ ಸಂಗತಿ ತಿಳಿದಿದೆ" ಎಂದು ಅವರು ವ್ಯಂಗ್ಯವಾಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News