ಡಿ. 21ರಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ

Update: 2023-12-17 16:46 GMT

ಫೈಲ್ ಫೋಟೋ | twitter/INCIndia 

ಹೊಸದಿಲ್ಲಿ: ಮುಂಬರುವ ಲೋಕಸಭೆ ಚುನಾವಣೆಗೆ ಕಾರ್ಯ ತಂತ್ರ ರೂಪಿಸುವ ಹಾಗೂ ಬಿಜೆಪಿಯನ್ನು ಮಣಿಸಲು ಚುನಾವಣಾ ಪ್ರಚಾರಕ್ಕೆ ತಳಮಟ್ಟದಲ್ಲಿ ಯೋಜನೆ ರೂಪಿಸುವ ಉದ್ದೇಶದಿಂದ ಕಾಂಗ್ರೆಸ್ ಡಿಸೆಂಬರ್ 21ರಂದು ತನ್ನ ಕಾರ್ಯಾಕಾರಿ ಸಮಿತಿ ಸಭೆ ಕರೆದಿದೆ.

‘ಇಂಡಿಯಾ’ ಮೈತ್ರಿಕೂಟದ ಸಭೆ ಡಿಸೆಂಬರ್ 19ರಂದು ನಡೆಯಲಿದ್ದು, ಅನಂತರ ಎರಡು ದಿನಗಳ ಬಳಿಕ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಈ ಸಭೆ ನಡೆಯಲಿದೆ. ಸ್ಥಾನ ಹಂಚಿಕೆ ಹಾಗೂ ಚುನಾವಣಾ ಪ್ರಚಾರ ಈ ಸಭೆಯ ಮುಖ್ಯ ಕಾರ್ಯಸೂಚಿಯಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

2024ರ ವಿಧಾನ ಸಭೆ ಚುನಾವಣೆಗೆ ಮುನ್ನ ನಿರುದ್ಯೋಗ ಹಾಗೂ ಬೆಲೆ ಏರಿಕೆಯನ್ನು ಮುಖ್ಯ ವಿಷಯವಾಗಿ ಇರಿಸಿಕೊಂಡು ರಾಹುಲ್ ಗಾಂಧಿ ಅವರು ಕೈಗೊಳ್ಳಬಹುದಾದ ಯಾತ್ರೆಯ ಕುರಿತು ಕೂಡ ಈ ಸಭೆಯಲ್ಲಿ ಚರ್ಚೆ ನಡೆಯಲಿದೆ. ಕಾಲ್ನಡಿಗೆ ಸೇರಿದಂತೆ ಪೂರ್ವದಿಂದ ಪಶ್ಚಿಮದ ವರೆಗೆ ಹೈಬ್ರಿಡ್ ಮಾದರಿಯ ಯಾತ್ರೆ ಕೈಗೊಳ್ಳಲು ಪಕ್ಷ ಚಿಂತನೆ ನಡೆಸುತ್ತಿದೆ ಹಾಗೂ ಈ ಬಗ್ಗೆ ಪಕ್ಷ ಶೀಘ್ರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ಮುನ್ನ ‘ಇಂಡಿಯಾ’ ಮೈತ್ರಿಕೂಟದ ನಾಯಕರ 4ನೇ ಸಭೆ ಹೊಸದಿಲ್ಲಿಯಲ್ಲಿ ಡಿಸೆಂಬರ್ 19ರಂದು ಅಪರಾಹ್ನ 3 ಗಂಟೆಗೆ ಆಯೋಜಿಸಲಾಗಿದೆ ಎಂದು ಅವು ತಿಳಿಸಿವೆ.

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಯಾಗಿ ‘‘ಮೈನ್ ನಹೀ, ಹಮ್’’ (ನಾನಲ್ಲ, ನಾವು) ಎಂಬ ಏಕತೆಯ ಧ್ಯೇಯದೊಂದಿಗೆ ಮುನ್ನಡೆಯಲು ಪಕ್ಷಗಳು ನಿರ್ಧರಿಸಿವೆ ಎಂದು ಕಾಂಗ್ರೆಸ್‌ ನ ಹಿರಿಯ ನಾಯಕರು ತಿಳಿಸಿದ್ದಾರೆ.

ಹಿಂದಿ ಭಾಷಿಕ ರಾಜ್ಯಗಳಾದ ಮಧ್ಯಪ್ರದೇಶ, ಚತ್ತೀಸ್‌ ಗಡ ಹಾಗೂ ರಾಜಸ್ಥಾನದಲ್ಲಿ ಸೋಲಲು ಹಾಗೂ ತೆಲಂಗಾಣದಲ್ಲಿ ಗೆದ್ದು ಸರಕಾರ ರಚಿಸಲು ಕಾರಣವಾದ ಇತ್ತೀಚೆಗಿನ ವಿಧಾನ ಸಭಾ ಚುನಾವಣೆ ಫಲಿತಾಂಶವನ್ನು ಕೂಡ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ವಿಶ್ಲೇಷಣೆ ನಡೆಸಲಿದೆ. 

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News