ರೈಲಿನಲ್ಲಿ 4 ಮಂದಿಯನ್ನು ಹತ್ಯೆಗೈದ ಆರ್‌ಪಿಎಫ್‌ ಕಾನ್‌ಸ್ಟೇಬಲ್‌ ವಿರುದ್ಧದ ಕೇಸಿನಲ್ಲಿ ಮತೀಯ ದ್ವೇಷ ಹರಡಿದ ಆರೋಪ ಹೊರಿಸಿ ಸೆಕ್ಷನ್‌ 152ಎ ಸೇರ್ಪಡೆ

Update: 2023-08-07 10:37 GMT

ಆರೋಪಿ ಚೇತನ್‌ ಸಿಂಗ್‌ (Twitter)

ಹೊಸದಿಲ್ಲಿ: ಜೈಪುರ್-ಮುಂಬೈ ರೈಲಿನಲ್ಲಿ ತನ್ನ ಹಿರಿಯ ಸಹೋದ್ಯೋಗಿ ಹಾಗೂ ಮೂರು ಮಂದಿ ಇತರ ಪ್ರಯಾಣಿಕರನ್ನು ಗುಂಡಿಕ್ಕಿ ಹತ್ಯೆಗೈದ ರೈಲ್ವೆ ಸುರಕ್ಷತಾ ಪಡೆ ಕಾನ್‌ಸ್ಟೇಬಲ್‌ ಚೇತನ್‌ ಸಿಂಗ್‌ನ ಕೃತ್ಯದ ಹಿಂದೆ ಯಾವುದೇ ಕೋಮು ವಿಚಾರವಿಲ್ಲವೆಂದು ಸ್ಪಷ್ಟಪಡಿಸಿದ್ದ ರೈಲ್ವೆ ಪೊಲೀಸರು ಇದೀಗ ಸಿಂಗ್‌ ವಿರುದ್ಧ ಧರ್ಮದ ಆಧಾರದಲ್ಲಿ ವಿವಿಧ ವರ್ಗದ ಜನರ ನಡುವೆ ದ್ವೇಷ ಉಂಟುಮಾಡುವ ಕುರಿತಾದ ಸೆಕ್ಷನ್‌ 152ಎ ಅಡಿಯಲ್ಲಿ ಕೂಡ ಆರೋಪವನ್ನು ತಮ್ಮ ಎಫ್‌ಐಆರ್‌ನಲ್ಲಿ ಸೇರಿಸಿದ್ದಾರೆ. ಈ ಕುರಿತು ಪೊಲೀಸರು ಇಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಆಗಸ್ಟ್‌ 11ರ ತನಕ ಆರೋಪಿಯನ್ನು ನ್ಯಾಯಾಲಯ ಪೊಲೀಸ್‌ ಕಸ್ಟಡಿಗೆ ವಹಿಸಿದೆ.

ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‌ 302 (ಕೊಲೆ), ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 3, 25, 27‌ ಮತ್ತು ರೈಲ್ವೆ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾಗಿರುವುದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿ ಚೇತನ್‌ ಹತ್ಯೆಗೈದ ಮೂವರು ಪ್ರಯಾಣಕರು ಮುಸ್ಲಿಮರಾಗಿದ್ದಾರೆ. ಅವರನ್ನು ಅಬ್ದುಲ್‌ ಖಾದಿರ್‌ಬಾಯಿ ಮುಹಮ್ಮದ್‌ ಹುಸೈನ್‌ ಭಾನ್ಪುರ್‌ವಾಲ, ಅಖ್ತರ್‌ ಅಬ್ಬಾಸ್‌ ಆಲಿ ಮತ್ತು ಸದರ್‌ ಮುಹಮ್ಮದ್‌ ಹುಸೈನ್‌ ಎಂದು ಗುರುತಿಸಲಾಗಿದೆ. ಆರೋಪಿ ಮೊದಲು ತನ್ನ ಹಿರಿಯ ಸಹೋದ್ಯೋಗಿ ಸಬ್‌ ಇನ್‌ಸ್ಪೆಕ್ಟರ್‌ ಟೀಕಾ ರಾಮ್‌ ಮೀನಾ ಅವರಿಗೆ ಗುಂಡಿಕ್ಕಿ ನಂತರ ಒಂದರ ಮೂವರು ಪ್ರಯಾಣಿಕರನ್ನು ಸಾಯಿಸಿದ್ದ.

ಈ ಘಟನೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವೀಡಿಯೋವೊಂದರಲ್ಲಿ ಸಿಂಗ್‌ ಕಾಲ ಕೆಳಗೆ ರಕ್ತಸಿಕ್ತ ದೇಹವೊಂದು ಬಿದ್ದಿರುವುದು ಹಾಗೂ ಆತ ಪಾಕಿಸ್ತಾನ ಮತ್ತು ದೇಶೀಯ ರಾಜಕೀಯ ವಿಷಯಗಳ ಬಗ್ಗೆ ಮಾತನಾಡುತ್ತಿರುವುದು ಕೇಳಿಸಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News