ಮಣಿಪುರ ಘಟನೆ ಸಂತ್ರಸ್ತೆಯರನ್ನು ಭೇಟಿಯಾಗಲು ನಾಗರಿಕ ಸಂಘಟನೆಗಳ ಪ್ರತಿರೋಧದಿಂದ ಸಾಧ್ಯವಾಗಿಲ್ಲ: ಸುಪ್ರೀಂ ಕೋರ್ಟ್ ಗೆ ತಿಳಿಸಿದ ಕೇಂದ್ರ
ಹೊಸದಿಲ್ಲಿ: ಮಣಿಪುರದಲ್ಲಿ ಮೂವರು ಮಹಿಳೆಯರ ಮೇಲೆ ನಡೆದ ಲೈಂಗಿಕ ಹಲ್ಲೆಯಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ಇಂತಹ ಎಲ್ಲಾ ಪ್ರಕರಣಗಳನ್ನು ಮಣಿಪುರ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ಮಾಡುವಂತೆ ಸೂಚಿಸಲಾಗಿದೆ ಹಾಗೂ ಅವರು ನೇರವಾಗಿ ತನಿಖೆಯ ಉಸ್ತುವಾರಿ ನೋಡಿಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟಿಗೆ ಕಳೆದ ವಾರ ಸಲ್ಲಿಸಿದ ವರದಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಮನಃಶಾಸ್ತ್ರಜ್ಞೆಯರನ್ನೊಳಗೊಂಡ ಮಹಿಳಾ ತಂಡವೊಂದನ್ನು ಸಂತ್ರಸ್ತೆಯರ ಸಹಾಯಕ್ಕಾಗಿ ರಚಿಸಲಾಗಿದೆಯಾದರೂ, ಚುರಚಂದಪುರದ ನಾಗರಿಕ ಸಮಾಜ ಸಂಘಟನೆಗಳ ಪ್ರತಿರೋಧದಿಂದಾಗಿ ರಾಜ್ಯದ ಆಡಳಿತವು ಸಂತ್ರಸ್ತೆಯರನ್ನು ಮುಖಃತ ಅಥವಾ ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾಗಿಲ್ಲ, ಅವರ ಕುಟುಂಬಗಳು ಘಟನೆ ನಂತರ ಪರಾರಿಯಾಗಿವೆ ಎಂದೂ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಮಣಿಪುರದಲ್ಲಿ ಮೂವರು ಮಹಿಳೆಯರ ನಗ್ನ ಮೆರವಣಿಗೆ ನಡೆಸಿ ಅವರ ಮೇಳೆ ಲೈಂಗಿಕ ದೌರ್ಜನ್ಯ ನಡೆದ ಘಟನೆಯಿಂದ ತನಗೆ ತೀವ್ರ ಆತಂಕವಾಗಿದೆ ಎಂದು ಜುಲೈ 20ರಂದು ಹೇಳಿದ್ದ ಸುಪ್ರೀಂ ಕೋರ್ಟ್ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಯಾವ ಕ್ರಮಕೈಗೊಳ್ಳಲಾಗಿದೆ ಎಂದು ವಿವರಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಸೂಚಿಸಿತ್ತು.
ಜುಲೈ 28ರಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದಾರೆ. ಈ ಘಟನೆ ಬೆಳಕಿಗೆ ಬಂದ ನಂತರ ಕೇಂದ್ರ ಗೃಹ ಸಚಿವಾಲಯ ಅಲ್ಲಿನ ಬೆಳವಣಿಗೆಗಳನ್ನು ಸತತ ಅವಲೋಕಿಸುತ್ತಿದೆ ಎಂದು ಅದರಲ್ಲಿ ಹೇಳಲಾಗಿದೆಯಲ್ಲದೆ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವ ನಿರ್ಧಾರ ಹಾಗೂ ವಿಚಾರಣೆಯನ್ನು ಮಣಿಪುರದ ಹೊರಗಿನ ನ್ಯಾಯಾಲಯದಲ್ಲಿ ನಡೆಸುವ ಇಂಗಿತದ ಬಗ್ಗೆ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಆದರೆ ಈ ನಿಟ್ಟಿನಲ್ಲಿ ಅನುಮತಿಸುವ ಅಧಿಕಾರ ಸುಪ್ರೀಂ ಕೋರ್ಟಿಗೆ ಮಾತ್ರ ಇರುವುದರಿಂದ ಈ ಕುರಿತಂತೆ ಆದೇಶ ಹೊರಡಿಸುವಂತೆ ಕೋರಲಾಗಿದೆ.
ದೌರ್ಜನ್ಯ ಪ್ರಕರಣಗಳ ಸಂತ್ರಸ್ತೆಯರಿಗೆ ಸೂಕ್ತ ಪುನರ್ವಸತಿ ಕುರಿತಂತೆ ಕ್ರಮವನ್ನೂ ಕೈಗೊಳ್ಳಲಾಗುತ್ತಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.