ರೈಲು ಹಳಿಯಲ್ಲಿ ಫೊಟೋ ಶೂಟ್ | ರೈಲು ಹತ್ತಿರ ಬಂದಾಗ ಸೇತುವೆಯಿಂದ 90 ಅಡಿ ಆಳಕ್ಕೆ ಜಿಗಿದ ದಂಪತಿ!
ಜೈಪುರ : ರಾಜಸ್ಥಾನದ ಪಾಲಿಯಲ್ಲಿ ರೈಲ್ವೆ ಹಳಿಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ದಂಪತಿಗಳು ರೈಲು ಹತ್ತಿರ ಬಂದಾಗ ರಕ್ಷಣೆ ಪಡೆಯಲು ಸೇತುವೆಯಿಂದ 90 ಅಡಿ ಆಳಕ್ಕೆ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ವರದಿಯಾಗಿದೆ.
ರಾಹುಲ್ ಮೇವಾಡ, ಜಾಹ್ನವಿ ಎಂದು ಗುರುತಿಸಲಾದ ದಂಪತಿಗಳು ಗೋರ್ಮ್‌ಘಾಟ್‌ಗೆ ಭೇಟಿ ನೀಡುತ್ತಿದ್ದಾಗ ಮೀಟರ್ ಗೇಜ್ ರೈಲುಗಳಿಗಾಗಿ ವಿನ್ಯಾಸಗೊಳಿಸಲಾದ ಪಾರಂಪರಿಕ ಸೇತುವೆಯ ಮೇಲೆ ಫೊಟೋ ತೆಗೆದುಕೊಳ್ಳಲು ನಿರ್ಧರಿಸಿದರು ಎನ್ನಲಾಗಿದೆ. ಅದರಂತೆ ಫೊಟೋ ತೆಗೆದುಕೊಳ್ಳುತ್ತಿದ್ದಾಗ ಅವರಿಗೆ ರೈಲು ಹತ್ತಿರ ಬಂದದ್ದೇ ಅರಿವಿಗೆ ಬರಲಿಲ್ಲ. ಇವರನ್ನು ಕಂಡ ಲೋಕೋ ಪೈಲೆಟ್ ಬ್ರೇಕ್ ಹಾಕಿದಾಗ ನಿಧಾನಗತಿಯಲ್ಲಿ ಸಾಗುತ್ತಿದ್ದ ರೈಲು ನಿಂತಿತು. ಆದರೆ ಭಯಬೀತರಾದ ನವ ದಂಪತಿಗಳು ಅದಾಗಲೇ ತಮ್ಮನ್ನು ರಕ್ಷಿಸಿಕೊಳ್ಳಲು ಸೇತುವೆಯಿಂದ 90 ಅಡಿ ಆಳಕ್ಕೆ ಹಾರಿದ್ದರು ಎನ್ನಲಾಗಿದೆ.
ಘಟನೆಯ ನಂತರ ರಾಹುಲ್ ಮೇವಾಡ, ಜಾಹ್ನವಿ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಬೆನ್ನುಮೂಳೆಗೆ ತೀವ್ರ ಪೆಟ್ಟಾದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ರಾಹುಲ್ ಅವರನ್ನು ಜೋಧ್‌ಪುರಕ್ಕೆ ವರ್ಗಾಯಿಸಲಾಗಿದೆ. ಕಾಲು ಮುರಿತಕ್ಕೆ ಒಳಗಾಗಿರುವ ಜಾಹ್ನವಿ ಪಾಲಿಯಲ್ಲಿರುವ ಬಂಗಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.