ವಕ್ಫ್ ಬೋರ್ಡ್‌ನ ಅಕ್ರಮ ಹಣ ವರ್ಗಾವಣೆ ಪ್ರಕರಣ | ಎಎಪಿಯ ಅಮಾನತುಲ್ಲಾ ಖಾನ್ ಗೆ ನ್ಯಾಯಾಲಯ ಸಮನ್ಸ್
ಹೊಸದಿಲ್ಲಿ: ದಿಲ್ಲಿ ವಕ್ಫ್ ಬೋರ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಮನ್ಸ್‌ಗೆ ಹಾಜರಾಗದ ಹಿನ್ನಲೆಯಲ್ಲಿ ಜಾರಿ ನಿರ್ದೇಶನಾಲಯ (ಈಡಿ) ಇತ್ತೀಚೆಗೆ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಆಮ್ ಆದ್ಮಿ ಪಾರ್ಟಿ (ಎಎಪಿ)ಯ ಶಾಸಕ ಅಮಾನತುಲ್ಲಾ ಖಾನ್‌ಗೆ ರೋಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM), ದಿವ್ಯಾ ಮಲ್ಹೋತ್ರಾ ಅವರು ಈಡಿಯ ಆರೋಪಗಳನ್ನು ಆಲಿಸಿದ ನಂತರ ಸಮನ್ಸ್ ಜಾರಿ ಮಾಡಿದರು. ಏಪ್ರಿಲ್ 20, 2024 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಅಮಾನತುಲ್ಲಾ ಖಾನ್ ಅವರಿಗೆ ನ್ಯಾಯಾಲಯ ಸೂಚಿಸಿದೆ.
ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಈಡಿ)ಯ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಸೈಮನ್ ಬೆಂಜಮಿನ್ ಹಾಜರಾಗಿದ್ದರು.
ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸುವ ಮೂಲಕ ಮತ್ತು ತನಿಖೆಗೆ ಪದೇ ಪದೇ ಗೈರು ಹಾಜರಾಗುವ ಮೂಲಕ, ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಅಮಾನತುಲ್ಲಾ ಖಾನ್ ಈಗ ಆರೋಪಿಯಾಗಿ ಬದಲಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಈಡಿ) ಆರೋಪಿಸಿದೆ. ಅವರು ಏಜೆನ್ಸಿಯ ಮುಂದೆ ಹಾಜರಾಗದ ಕಾರಣ ಅವರ ವಿರುದ್ಧ ತನಿಖೆಯನ್ನು ಮುಕ್ತಾಯಗೊಳಿಸಲು ಸಾಧ್ಯವಾಗಲಿಲ್ಲ ಎಂದು ಜಾರಿ ನಿರ್ದೇಶನಾಲಯ (ಈಡಿ) ಪರ ಹಾಜರಿದ್ದ ವಕೀಲರು ತಿಳಿಸಿದ್ದಾರೆ.