ಕ್ರಿಮಿನಲ್ ಕಾನೂನು ಸುಧಾರಣಾ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ; ಕಾನೂನಾಗಿ ಜಾರಿ
ಹೊಸದಿಲ್ಲಿ: ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗೆ ಬದಲಿಯಾಗಿ ಅಂಗೀಕಾರಗೊಂಡಿರುವ ಮೂರು ಅಪರಾಧ ಕಾನೂನುಗಳ ಸುಧಾರಣಾ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಡಿಸೆಂಬರ್ 25ರಂದು ಅಂಕಿತ ಹಾಕಿದ್ದಾರೆ.
ಕಳೆದ ವಾರ ಸಂಸದರನ್ನು ಸಾಮೂಹಿಕವಾಗಿ ಅಮಾನತುಗೊಳಿಸಿದ್ದರಿಂದ ಸುಮಾರು ಮೂರನೆ ಎರಡರಷ್ಟು ವಿರೋಧ ಪಕ್ಷಗಳ ಸದಸ್ಯರ ಅನುಪಸ್ಥಿತಿಯಲ್ಲಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮಗಳು ಸಂಸತ್ತಿನ ಎರಡೂ ಸದನದಲ್ಲಿ ಅನುಮೋದನೆಗೊಂಡಿದ್ದವು.
ಈ ಮೂರು ಮಸೂದೆಗಳನ್ನು ಮೊದಲು ಸಂಸತ್ತಿನ ಕೆಳಮನೆಯಲ್ಲಿ ಆಗಸ್ಟ್ 11, 2023ರಂದು ಮಂಡಿಸಲಾಗಿತ್ತು. ಆದರೆ, ಗೃಹ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಮಾಡಿದ ಶಿಫಾರಸುಗಳ ಆಧಾರದಲ್ಲಿ ಆ ಮಸೂದೆಗಳನ್ನು ನೂತನ ಕರಡುಗಳ ಮೂಲಕ ಬದಲಿಸಲು ಈ ತಿಂಗಳ ಆರಂಭದಲ್ಲಿ ಸರ್ಕಾರವು ನಿರ್ಧರಿಸಿತ್ತು.
ಇದರೊಂದಿಗೆ, ಡಿಸೆಂಬರ್ 24ರಂದು ದೂರಸಂಪರ್ಕ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದು, ಅದೀಗ ಕಾಯ್ದೆಯಾಗಿ ಬದಲಾಗಿದೆ. ಆದರೆ, ಕಾನೂನು ಬಾಹಿರವಾಗಿ ಖಾಸಗಿತನಕ್ಕೆ ಧಕ್ಕೆಯನ್ನುಂಟು ಮಾಡುವ ಈ ಕಾಯ್ದೆಯ ಕುರಿತು ನಾಗರಿಕ ಹಕ್ಕು ಹೋರಾಟಗಾರರು ಕಳವಳ ವ್ಯಕ್ತಪಡಿಸಿದ್ದಾರೆ.