ಪೋಕ್ಸೊ ಅಡಿ ಪ್ರೇಮ ಸಂಬಂಧಗಳ ಅಪರಾಧೀಕರಣದಿಂದಾಗಿ ನ್ಯಾಯಾಂಗದ ಮೇಲಿನ ಹೊರೆ ಹೆಚ್ಚಳ: ಬಾಂಬೆ ಹೈಕೋರ್ಟ್

Update: 2023-07-15 16:55 GMT

ಬಾಂಬೆ ಹೈಕೋರ್ಟ್ | Photo : PTI

ಮುಂಬೈ: ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ (ಪೋಕ್ಸೊ)ಯಡಿ ಪ್ರೇಮ ಸಂಬಂಧಗಳನ್ನು ಅಪರಾಧವನ್ನಾಗಿಸಿರುವುದು ನ್ಯಾಯ ವ್ಯವಸ್ಥೆಯ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

2016ರಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ದೋಷಮುಕ್ತಗೊಳಿಸುತ್ತಾ, ನ್ಯಾ. ಭಾರತಿ ಡಾಂಗ್ರೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅತ್ಯಾಚಾರ ನಡೆಯಿತೆನ್ನಲಾದ ವೇಳೆ ಆರೋಪಿಯ ವಯಸ್ಸು 25 ಮತ್ತು ಬಾಲಕಿಯ ವಯಸ್ಸು 17 ವರ್ಷ ಮತ್ತು 5 ತಿಂಗಳು ಆಗಿತ್ತು. ತಾವು ಪರಸ್ಪರ ಸಮ್ಮತಿಯ ಪ್ರೇಮ ಸಂಬಂಧವನ್ನು ಹೊಂದಿದ್ದೆವು ಎಂದು ಬಾಲಕಿ ಹೇಳಿಕೆ ನೀಡಿದ್ದಳು.

2019ರ ಫೆಬ್ರವರಿಯಲ್ಲಿ, ವಿಚಾರಣಾ ನ್ಯಾಯಾಲಯವೊಂದು, ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಆರೋಪಿ ದೋಷಿ ಎಂಬುದಾಗಿ ಘೋಷಿಸಿತ್ತು ಮತ್ತು ಆತನಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿತ್ತು. ಜುಲೈ 10ರಂದು ಈ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಲೈಂಗಿಕ ಹಿಂಸೆಯಿಂದ ಮಕ್ಕಳನ್ನು ರಕ್ಷಿಸಬೇಕು ಹೌದು, ಆದರೆ ಅದೇ ವೇಳೆ, ಯಾವುದೇ ಅಪಾಯಕ್ಕೆ ಒಳಗಾಗದೆ ತಮ್ಮ ಆಯ್ಕೆಗಳನ್ನು ಮಾಡಿಕೊಳ್ಳುವ ಅವಕಾಶವೂ ಅವರಿಗೆ ಇರಬೇಕು ಎಂದು ನ್ಯಾ. ಡಾಂಗ್ರೆ ಹೇಳಿದರು.

17 ವರ್ಷ 364 ದಿನಗಳ ಪ್ರಾಯದ ಬಾಲಕಿಯೊಂದಿಗೆ ಸಮ್ಮತದ ಲೈಂಗಿಕ ಸಂಬಂಧ ಹೊಂದಿರುವುದಕ್ಕಾಗಿ 20 ವರ್ಷದ ಯುವಕನೊಬ್ಬನನ್ನು ದೋಷಿ ಎಂಬುದಾಗಿ ಪರಿಗಣಿಸುವ ಸಾಧ್ಯತೆಯಿದೆ ಎಂದು ನ್ಯಾಯಾಧೀಶೆ ಹೇಳಿದರು.

ಹದಿಹರೆಯದ ಲೈಂಗಿಕತೆ ಕುರಿತ ದಂಡನಾತ್ಮಕ ನಿಲುವಿನಿಂದಾಗಿ ಹದಿಹರೆಯದವರು ಲೈಂಗಿಕ ಮತ್ತು ಪ್ರಜನನ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುವ ಅವಕಾಶ ಕುಂಠಿತವಾಗಿದೆ ಎಂದು ನ್ಯಾಯಾಧೀಶೆ ಅಭಿಪ್ರಾಯಪಟ್ಟರು.

‘‘ಪ್ರೇಮ ಸಂಬಂಧಗಳನ್ನು ಅಪರಾಧವಾಗಿಸಿರುವುದು ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದು ನ್ಯಾಯಾಂಗ, ಪೊಲೀಸ್ ಮತ್ತು ಮಕ್ಕಳ ರಕ್ಷಣಾ ವ್ಯವಸ್ಥೆಯ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. ಕೊನೆಗೆ, ಸಂತ್ರಸ್ತೆಯು ಆರೋಪಿಯ ವಿರುದ್ಧದ ಆರೋಪಗಳನ್ನು ಬೆಂಬಲಿಸದೆ ತಿರುಗಿಬಿದ್ದಾಗ, ಆರೋಪಿಯನ್ನು ದೋಷಮುಕ್ತಗೊಳಿಸದೆ ಬೇರೆ ಆಯ್ಕೆ ಇಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.

ಕಾನೂನುಬದ್ಧ ಮದುವೆಯ ಪ್ರಾಯದಿಂದ ಸಮ್ಮತಿಯ ಲೈಂಗಿಕ ಸಂಬಂಧ ಹೊಂದುವ ಪ್ರಾಯವನ್ನು ಬೇರ್ಪಡಿಸಬೇಕು, ಯಾಕೆಂದರೆ ಲೈಂಗಿಕ ಚಟುವಟಿಕೆಗಳು ಮದುವೆಯ ಚೌಕಟ್ಟಿನೊಳಗೆ ಮಾತ್ರ ನಡೆಯುವುದಲ್ಲ ಎಂದು ಹೈಕೋರ್ಟ್ ಹೇಳಿತು. ನ್ಯಾಯಾಂಗ ವ್ಯವಸ್ಥೆ ಮತ್ತು ಸಮಾಜವು ಈ ಅಂಶವನ್ನು ಗಮನಿಸಬೇಕು ಎಂದು ಅದು ಹೇಳಿತು.

ಇತ್ತೀಚೆಗೆ ಪೋಕ್ಸೊ ಕಾಯ್ದೆಗೆ ಸಂಬಂಧಿಸಿ ಮಧ್ಯಪ್ರದೇಶ ಹೈಕೋರ್ಟ್ ಕೂಡ ಇಂಥದೇ ಅಭಿಪ್ರಾಯವನ್ನು ಮಧ್ಯಪ್ರದೇಶ ಹೈಕೋರ್ಟ್ ಕೂಡ ವ್ಯಕ್ತಪಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News