ತೀವ್ರಗೊಳ್ಳಲಿರುವ ತೇಜ್ ಚಂಡಮಾರುತ, ಗುಜರಾತ್ ಸುರಕ್ಷಿತ: ಹವಾಮಾನ ಇಲಾಖೆ

Update: 2023-10-21 14:16 GMT

Photo- PTI

ಹೊಸದಿಲ್ಲಿ: ನೈಋತ್ಯ ಅರಬಿ ಸಮುದ್ರದಲ್ಲಿ ಚಲಿಸುತ್ತಿರುವ ತೇಜ್ ಚಂಡಮಾರುತವು ರವಿವಾರ ತೀವ್ರ ಚಂಡಮಾರುತದ ಸ್ವರೂಪವನ್ನು ಪಡೆದುಕೊಳ್ಳುವ ಸಾಧ್ಯತೆಯಿದೆ ಹಾಗೂ ಒಮನ್ ಮತ್ತು ನೆರೆಯ ಯೆಮೆನ್‌ನ ದಕ್ಷಿಣ ಕರಾವಳಿಯತ್ತ ಸಾಗಲಿದೆ ಎಂದು ಶನಿವಾರ ತಿಳಿಸಿರುವ ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು, ಗುಜರಾತಿನ ಮೇಲೆ ಯಾವುದೇ ಪರಿಣಾಮವನ್ನು ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆಗ್ನೇಯ ಮತ್ತು ನೈಋತ್ಯ ಅರಬಿ ಸಮುದ್ರದಲ್ಲಿ ಕಡಿಮೆ ಒತ್ತಡದ ಪ್ರದೇಶವು ಸೃಷ್ಟಿಯಾಗಿದ್ದು, ವಾಯುಭಾರ ಕುಸಿತವಾಗಿ ರೂಪಾಂತರಗೊಳ್ಳಲಿದೆ ಮತ್ತು ಅ.21ರ ಬೆಳಿಗ್ಗೆ ವೇಳೆ ಚಂಡಮಾರುತವಾಗಿ ತೀವ್ರಗೊಳ್ಳುವ ನಿರೀಕ್ಷೆಯಿದೆ ಎಂದು ಐಎಂಡಿ ಶುಕ್ರವಾರ ತಿಳಿಸಿತ್ತು.

ಅದು ರವಿವಾರ ಸಂಜೆಯ ವೇಳೆಗೆ ತೀವ್ರ ಚಂಡಮಾರುತವಾಗಿ ರೂಪಾಂತರಗೊಳ್ಳುವ ಸಾಧ್ಯತೆಯಿದ್ದು, ದಕ್ಷಿಣ ಒಮನ್ ಮತ್ತು ಯೆಮೆನ್ ಕರಾವಳಿಯತ್ತ ಚಲಿಸಲಿದೆ. ಚಂಡಮಾರುತವು ಪಶ್ಚಿಮ-ವಾಯುವ್ಯದತ್ತ ಚಲಿಸುವುದರಿಂದ ಅದು ಪೂರ್ವದಲ್ಲಿರುವ ಗುಜರಾತ್ ಮೇಲೆ ಯಾವುದೇ ಪರಿಣಾಮವನ್ನು ಬೀರದಿರಬಹುದು. ಮುಂದಿನ ಏಳು ದಿನಗಳ ಕಾಲ ಗುಜರಾತಿನಲ್ಲಿ ಶುಷ್ಕ ಹವಾಮಾನ ಇರಲಿದೆ ಎಂದು ಅಹ್ಮದಾಬಾದ್‌ನಲ್ಲಿ ಹವಾಮಾನ ಕೇಂದ್ರದ ನಿರ್ದೇಶಕಿ ಮನೋರಮಾ ಮೊಹಂತಿ ತಿಳಿಸಿದರು.

ಚಂಡಮಾರುತವು ಗುಜರಾತ್ ಕಡೆಗೆ ಚಲಿಸುತ್ತಿದ್ದು, ಸದ್ಯಕ್ಕೆ ಅದರಿಂದ ಯಾವುದೇ ಬೆದರಿಕೆಯಿಲ್ಲ ಎಂದು ರಾಜ್ಯದ ಪರಿಹಾರ ಆಯುಕ್ತ ಅಲೋಕ್ ಕುಮಾರ್ ಪಾಂಡೆ ಹೇಳಿದರು.

ಕಳೆದ ಜೂನ್‌ನಲ್ಲಿ ಅರಬಿ ಸಮುದ್ರದಲ್ಲಿ ಸೃಷ್ಟಿಯಾಗಿದ್ದ ಬಿಪರ್‌ಜಾಯ್ ಚಂಡಮಾರುತವು ಗುಜರಾತಿನ ಕಛ್ ಮತ್ತು ಭಾಗಶಃ ಸೌರಾಷ್ಟ್ರದಲ್ಲಿ ವಿನಾಶವನ್ನುಂಟು ಮಾಡಿತ್ತು. ಆರಂಭದಲ್ಲಿ ಪಶ್ಚಿಮದತ್ತ ಸಾಗುತ್ತಿದ್ದ ಅದು ಬಳಿಕ ದಿಕ್ಕು ಬದಲಿಸಿ ಕಛ್‌ಗೆ ಅಪ್ಪಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News