ದೇವೇಂದ್ರ ಫಡ್ನವಿಸ್ ಮರಾಠಿಗರನ್ನು ವಿಭಜಿಸುತ್ತಿದ್ದಾರೆ: ಮರಾಠ ಮೀಸಲಾತಿ ಹೋರಾಟದ ನಾಯಕನ ವಾಗ್ದಾಳಿ
ಮುಂಬೈ: ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿರುವ ಮರಾಠ ಮೀಸಲಾತಿ ಹೋರಾಟದ ನಾಯಕ ಮನೋಜ್ ಜಾರಂಗೆ ಪಾಟೀಲ್, ದೇವೇಂದ್ರ ಫಡ್ನವಿಸ್ ಮರಾಠ ಸಮುದಾಯದ ಸದಸ್ಯರಿಗೆ ಮೀಸಲಾತಿಯನ್ನು ನಿರಾಕರಿಸಲು ಸಂಚು ಹೆಣೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದರೊಂದಿಗೆ ಫಡ್ನವಿಸ್ ನಿವಾಸಕ್ಕೆ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸುವುದಾಗಿಯೂ ಬೆದರಿಕೆ ಒಡ್ಡಿದ್ದಾರೆ.
ಮರಾಠ ಮೀಸಲಾತಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮನೋಜ್ ಜಾರಂಗೆ ಪಾಟೀಲ್, "ಮುಖ್ಯಮಂತ್ರಿ ಏಕನಾಥ್ ಶಿಂದೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಫಡ್ನವಿಸ್ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ. ಎಲ್ಲವೂ ಅವರ ನಿರ್ದೇಶನದ ಮೇಲೆ ನಡೆಯುತ್ತಿದ್ದು, ಅವರೇ ರಾಜ್ಯವನ್ನು ನಡೆಸುತ್ತಿದ್ದಾರೆ. ನಾನು ಜೀವ ತ್ಯಾಗ ಮಾಡಬೇಕೆಂದು ಫಡ್ನವಿಸ್ ಬಯಸುತ್ತಾರೆಯೆ? ನಾನು ಅವರ ಬಂಗಲೆಯತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತೇನೆ. ಸಾಧ್ಯವಿದ್ದರೆ ನನ್ನನ್ನು ತಡೆಯಲಿ" ಎಂದು ಸವಾಲು ಹಾಕಿದ್ದಾರೆ.
ಮಹಾರಾಷ್ಟ್ರ ಜನಸಂಖ್ಯೆಯಲ್ಲಿ ಶೇ. 30ರಷ್ಟಿರುವ, ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ಕಲ್ಪಿಸುವ ನಿರ್ಣಯವನ್ನು ಕಳೆದ ವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತು.
ಆದರೆ, ಯಾವ ಕಾನೂನೂ ನಮ್ಮ ಬೇಡಿಕೆ ಅನ್ವಯ ಜಾರಿಯಾಗಿಲ್ಲ. ನಾವು ಯಾವುದಕ್ಕೆ ಯೋಗ್ಯರಾಗಿದ್ದೇವೊ ಆ ಮೀಸಲಾತಿ ನಮಗೆ ಬೇಕು. ಕುಣಬಿ ಎಂದು ಪತ್ತೆಯಾದ ಸಮುದಾಯಗಳಿಗೆ ಇತರೆ ಹಿಂದುಳಿದ ವರ್ಗಗಳಡಿ ಮೀಸಲಾತಿ ಒದಗಿಸಬೇಕು. ಯಾರ ಬಳಿ ಅಂತಹ ಪುರಾವೆಗಳಿಲ್ಲವೊ ಅವರನ್ನು ಸಗೆ ಸೋಯರೆ ಎಂದು ಗುರುತಿಸುವ ಕಾನೂನನ್ನು ಜಾರಿಗೊಳಿಸಬೇಕು ಎಂದು ಮನೋಜ್ ಜಾರಂಗೆ ಪಾಟೀಲ್ ಆಗ್ರಹಿಸಿದ್ದಾರೆ.