ಡಿ. 4ರಿಂದ 22ರ ವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ : ಪ್ರಹ್ಲಾದ ಜೋಷಿ
ಹೊಸದಿಲ್ಲಿ: ಸಂಸತ್ತಿನ ಚಳಿಗಾಲದ ಅಧಿವೇಶನ ಡಿ. 4ರಂದು ಆರಂಭವಾಗಿ, ಡಿ.22ರ ವರೆಗೆ ಮುಂದುವರಿಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಅವರು ಗುರುವಾರ ತಿಳಿಸಿದ್ದಾರೆ.
ಚಳಿಗಾಲದ ಅಧಿವೇಶನವನ್ನು ನೂತನ ಸಂಸತ್‌ಭವನದಲ್ಲಿ ನಡೆಸಲಾಗುವುದು. 19 ದಿನಗಳಲ್ಲಿ 15 ಬೈಠಕ್‌ಗಳನ್ನು ನಡೆಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಈ ಅಧಿವೇಶನದಲ್ಲಿ ಐಪಿಸಿ, ಸಿಆರ್‌ಪಿಸಿ ಹಾಗೂ ಎವಿಡೆನ್ಸ್ ಆ್ಯಕ್ಟ್ ಅನ್ನು ಬದಲಾಯಿಸುವಂತೆ ಕೋರುವ ಮೂರು ಪ್ರಮುಖ ಮಸೂದೆಗಳ ಪರಿಶೀಲನೆ ನಡೆಯಲಿದೆ. ಈ ಮಸೂದೆಗೆ ಸಂಬಂಧಿಸಿದ ಮೂರು ವರದಿಗಳಿಗೆ ಗೃಹ ಖಾತೆಯ ಸ್ಥಾಯಿ ಸಮಿತಿ ಈಗಾಗಲೇ ಅನುಮೋದನೆ ನೀಡಿದೆ.
ಮುಖ್ಯ ಚುನಾವಣಾ ಆಯುಕ್ತ ಹಾಗೂ ಚುನಾವಣಾ ಆಯುಕ್ತರ ನಿಯೋಜನೆಗೆ ಸಂಬಂಧಿಸಿದ ಇನ್ನೊಂದು ಪ್ರಮುಖ ಮಸೂದೆ ಸಂಸತ್ತಿನಲ್ಲಿ ಬಾಕಿ ಇದೆ. ತೃಣಮೂಲ ಕಾಂಗ್ರೆಸ್‌ನ ಸಂಸದೆ ಮಹುವಾ ಮೊಯಿತ್ರಾ ವಿರುದ್ಧದ ‘ಹಣಕ್ಕಾಗಿ ಪ್ರಶ್ನೆ’ ಆರೋಪದ ಕುರಿತ ನೈತಿಕ ಸಮಿತಿಯ ವರದಿಯನ್ನು ಕೂಡ ಅಧಿವೇಶನದ ಸಂದರ್ಭ ಲೋಕಸಭೆಯಲ್ಲಿ ಮಂಡಿಸಲಾಗುವುದು.
ಚಳಿಗಾಲದ ಅಧಿವೇಶನ ಕ್ರಿಸ್‌ಮಸ್ ಮುನ್ನ ಅಂತ್ಯಗೊಳ್ಳಲಿದೆ. ಇದು ಸಂಸತ್ತಿನ ಈ ವರ್ಷದ ಕೊನೆಯ ಅಧಿವೇಶನವಾಗಲಿದೆ.