ಮೂಢನಂಬಿಕೆ, ತಾರತಮ್ಯದ ಕುರಿತ ಪೋಸ್ಟ್: ದಲಿತ ಪ್ರಾಧ್ಯಾಪಕರಿಗೆ ನೋಟಿಸ್ ನೀಡಿದ ಅಲಹಾಬಾದ್ ವಿವಿ

Update: 2024-11-21 13:51 GMT

 Photo | X/@UoA_Official

ಲಕ್ನೋ : ಅಲಹಾಬಾದ್ ವಿವಿ ದಲಿತ ಪ್ರಾಧ್ಯಾಪಕ ಪ್ರೊ. ವಿಕ್ರಮ್ ಹರಿಜನ್ ಅವರ ಮೂಢನಂಬಿಕೆ, ತಾರತಮ್ಯದ ಕುರಿತ ಪೋಸ್ಟ್ ವಿವಾದವೆಬ್ಬಿಸಿರುವ ಬೆನ್ನಲ್ಲೇ ಅಲಹಾಬಾದ್ ವಿವಿ ನೊಟೀಸ್ ಜಾರಿ ಮಾಡಿದೆ.

ಡಾ.ವಿಕ್ರಂ ಹರಿಜನ್ ಅಲಹಾಬಾದ್ ವಿಶ್ವವಿದ್ಯಾನಿಲಯದ ಮಧ್ಯಕಾಲೀನ ಮತ್ತು ಆಧುನಿಕ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಪ್ರೊ. ವಿಕ್ರಮ್ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವರು ಮತ್ತು ದೇವತೆಗಳ ಬಗ್ಗೆ ಅವಹೇಳನ ಮಾಡಿದ್ದಾರೆಂದು ಕೋಲಾಹಲ ಭುಗಿಲೆದ್ದಿತ್ತು. ಇದರಿಂದಾಗಿ ಅಲಹಾಬಾದ್ ವಿವಿ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಹಿಂದೂ ದೇವತೆಗಳ ಬಗ್ಗೆ ಕಮೆಂಟ್ ಮಾಡದಂತೆ ಎಚ್ಚರಿಕೆ ನೀಡಿದೆ. ಸಂಸ್ಥೆಯ ಪ್ರತಿಷ್ಠೆಗೆ ಹಾನಿಯುಂಟುಮಾಡುವ ಧರ್ಮ, ಸಂಸ್ಕೃತಿ ಸೂಕ್ಷ್ಮ ವಿಷಯಗಳ ಕುರಿತು ಪೋಸ್ಟ್ ಮಾಡದಂತೆ ಸೂಚಿಸಿದೆ.

ಪ್ರೊ. ಹರಿಜನ ಅವರು ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಜಾತಿ ಆಧಾರಿತ ತಾರತಮ್ಯ ಮತ್ತು ಮೂಢನಂಬಿಕೆ ಬಗ್ಗೆ ಹೇಳಿದ್ದರು. ಪೋಸ್ಟ್ ವೈರಲ್ ಬೆನ್ನಲ್ಲೇ ವಿವಾದ ಭುಗಿಲೆದ್ದಿತ್ತು. ಪ್ರೊ.ಹರಿಜನ ಅವರು ಬಹಿರಂಗ ಕ್ಷಮೆಯಾಚಿಸಿದರೂ ಗಲಾಟೆ ಶಮನವಾಗದ ಕಾರಣ ವಿಶ್ವವಿದ್ಯಾಲಯ ಅವರ ಮೇಲೆ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಇಂತಹ ವಿಷಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೊದಲು ಉಪಕುಲಪತಿಗಳಿಂದ ಪೂರ್ವಾನುಮತಿ ಪಡೆಯಬೇಕು ಎಂದು ಹರಿಜನ್ ಅವರಿಗೆ ಸೂಚನೆ ನೀಡಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ವಿಕ್ರಂ ಹರಿಜನ್, ಧರ್ಮ ಮತ್ತು ಜಾತಿ ಮೂಢನಂಬಿಕೆ ಮತ್ತು ತಾರತಮ್ಯವನ್ನು ಉತ್ತೇಜಿಸಿದರೆ ನಾನು ಅದರ ವಿರುದ್ಧ ಮಾತನಾಡುವುದನ್ನು ಮುಂದುವರಿಸುತ್ತೇನೆ. ಇದಕ್ಕೆ ನನಗೆ ನೋಟಿಸ್ ಅಡ್ಡಿಯಾಗುವುದಿಲ್ಲ. ಹಿಂದೂ ಧರ್ಮ, ಇಸ್ಲಾಂ ಅಥವಾ ಸಿಖ್ ಧರ್ಮವೇ ಆಗಿರಲಿ, ತಾರತಮ್ಯವನ್ನು ಪ್ರೋತ್ಸಾಹಿಸುವ ಎಲ್ಲಾ ಧರ್ಮಗಳ ವಿರುದ್ಧ ಮಾತನಾಡಲು ನಾನು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News