ದಿಲ್ಲಿ ಚುನಾವಣೆಗಾಗಿ ಎಎಪಿ ಮೊದಲ ಪಟ್ಟಿ ಬಿಡುಗಡೆ | ಎಲ್ಲರಿಗಿಂತ ಮುಂಚಿತವಾಗಿ ಚುನವಾಣಾ ಅಖಾಡಕ್ಕಿಳಿದ ಆಪ್

Update: 2024-11-21 14:02 GMT

ಅರವಿಂದ್ ಕೇಜ್ರಿವಾಲ್ | PC : PTI 

ಹೊಸದಿಲ್ಲಿ : ದಿಲ್ಲಿ ವಿಧಾನಸಭೆ ಚುನಾವಣೆಗೆ 11 ಅಭ್ಯರ್ಥಿಗಳನ್ನು ಆಮ್ ಆದ್ಮಿ ಪಕ್ಷ ಗುರುವಾರ ಘೋಷಿಸಿದೆ. ಈ ಮೊದಲ ಪಟ್ಟಿಯ 11 ಅಭ್ಯರ್ಥಿಗಳಲ್ಲಿ 6 ಅಭ್ಯರ್ಥಿಗಳು ಪಕ್ಷಾಂತರಿಗಳಾಗಿದ್ದಾರೆ. ಇದರಲ್ಲಿ ಮೂವರು ಬಿಜೆಪಿಯಿಂದ ಮತ್ತು ಮೂವರು ಕಾಂಗ್ರೆಸ್‌ ನಿಂದ ಆಪ್ ಗೆ ಬಂದವರು.

ಮುಂದಿನ ವರ್ಷದ ಫೆಬ್ರವರಿಯಲ್ಲಿ ದಿಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ.

ಬ್ರಹ್ಮ ಸಿಂಗ್ ತನ್ವಾರ್ ಛತ್ತರ್‌ಪುರದಿಂದ ಅಭ್ಯರ್ಥಿಯಾಗಿದ್ದರೆ, ಅನಿಲ್ ಝಾ ಕಿರಾಡಿಯಿಂದ ಎಎಪಿ ಅಭ್ಯರ್ಥಿಯಾಗಲಿದ್ದಾರೆ. ದೀಪಕ್ ಸಿಂಘ್ಲಾ ವಿಶ್ವಾಸ್ ನಗರದಲ್ಲಿ ಮತ್ತು ಸರಿತಾ ಸಿಂಗ್ ರೋಹ್ತಾಸ್ ನಗರದಲ್ಲಿ ಸ್ಪರ್ಧಿಸಲಿದ್ದಾರೆ. ಲಕ್ಷ್ಮಿ ನಗರದಲ್ಲಿ ಎಎಪಿ ಅಭ್ಯರ್ಥಿಯಾಗಿ ಬಿಬಿ ತ್ಯಾಗಿ ಮತ್ತು ಬದರ್‌ಪುರದಲ್ಲಿ ರಾಮ್ ಸಿಂಗ್ ನೇತಾಜಿ ಅವರನ್ನು ಹೆಸರಿಸಲಾಗಿದೆ.

ಜುಬೇರ್ ಚೌಧರಿ ಅವರು ಸೀಲಾಂಪುರದಿಂದ ಎಎಪಿ ಅಭ್ಯರ್ಥಿಯಾಗಲಿದ್ದಾರೆ ಮತ್ತು ವೀರ್ ಸಿಂಗ್ ದಿಂಗನ್ ಸೀಮಾಪುರಿಯಲ್ಲಿ ಸ್ಪರ್ಧಿಸಲಿದ್ದಾರೆ. ಗೌರವ್ ಶರ್ಮಾ ಘೋಂಡಾದಲ್ಲಿ ಸ್ಪರ್ಧಿಸಲಿದ್ದು, ಮನೋಜ್ ತ್ಯಾಗಿ ಕರವಾಲ್ ನಗರದಲ್ಲಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಸೋಮೇಶ್ ಶೌಕೀನ್ ಮಟಿಯಾಲದಿಂದ ಎಎಪಿ ಅಭ್ಯರ್ಥಿಯಾಗಲಿದ್ದಾರೆ.

ತನ್ವರ್ ಮತ್ತು ಝಾ ಇಬ್ಬರೂ ಮಾಜಿ ಬಿಜೆಪಿ ಶಾಸಕರಾಗಿದ್ದು, ಈ ವರ್ಷ ಎಎಪಿಗೆ ಬಂದವರು. ಬಿಬಿ ತ್ಯಾಗಿ ಕೂಡ ಬಿಜೆಪಿಯ ಮಾಜಿ ನಾಯಕ ಮತ್ತು ದೆಹಲಿಯ ಮಹಾನಗರ ಪಾಲಿಕೆಯಲ್ಲಿ ಎರಡು ಬಾರಿ ಕೌನ್ಸಿಲರ್ ಆಗಿದ್ದವರು. ದೀಪಕ್ ಸಿಂಘ್ಲಾ ಅವರು ಕಳೆದ ಬಾರಿ ವಿಶ್ವಾಸ ನಗರದಲ್ಲಿ ಬಿಜೆಪಿಯ ಓಂ ಪ್ರಕಾಶ್ ಶರ್ಮಾ ವಿರುದ್ಧ ಸೋತ ಪಕ್ಷದ ಹಿರಿಯ ನಾಯಕ. ಸರಿತಾ ಸಿಂಗ್ ಅವರು ಎಎಪಿಯ ವಿದ್ಯಾರ್ಥಿ ವಿಭಾಗ, ಛತ್ರ ಯುವ ಸಂಘರ್ಷ ಸಮಿತಿ ನಾಯಕಿ ಮತ್ತು ರೋಹ್ತಾಸ್ ನಗರದ ಮಾಜಿ ಶಾಸಕಿ.

ರಾಮ್ ಸಿಂಗ್ ನೇತಾಜಿ ಬದರ್‌ಪುರದಿಂದ ಎರಡು ಬಾರಿ ಶಾಸಕರಾಗಿದ್ದಾರೆ ಮತ್ತು ಜುಬೇರ್ ಚೌಧರಿ ಅವರು ಐದು ಬಾರಿ ಸೀಲಂಪುರ ಶಾಸಕ ಮತ್ತು ಕಾಂಗ್ರೆಸ್ ನಾಯಕ ಮತೀನ್ ಅಹ್ಮದ್ ಅವರ ಪುತ್ರರಾಗಿದ್ದಾರೆ. ವೀರ್ ಸಿಂಗ್ ಧಿಂಗನ್ ಅವರು ಈ ಹಿಂದೆ ಕಾಂಗ್ರೆಸ್‌ನಿಂದ ಸೀಮಾಪುರಿಯಿಂದ ಮೂರು ಬಾರಿ ಶಾಸಕರಾಗಿದ್ದರು.

ಗೌರವ್ ಶರ್ಮಾ ಎಎಪಿ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಮತ್ತು ಮನೋಜ್ ತ್ಯಾಗಿ ಮಾಜಿ ಕೌನ್ಸಿಲರ್. ಸೋಮೇಶ್ ಶೌಕೀನ್ ಕೂಡ ಈ ವರ್ಷ ಎಎಪಿಗೆ ಬಂದ ಮಾಜಿ ಕಾಂಗ್ರೆಸ್ ಶಾಸಕರಾಗಿದ್ದಾರೆ. ಎಎಪಿ ತನ್ನ ಮೂವರು ಹಾಲಿ ಶಾಸಕರಿಗೆ ಚುನಾವಣಾ ಟಿಕೆಟ್ ಅನ್ನು ನಿರಾಕರಿಸಿದೆ. ಕಿರಾರಿ ಶಾಸಕ ರಿತುರಾಜ್ ಝಾ, ಸೀಲಂಪುರ ಶಾಸಕ ಅಬ್ದುಲ್ ರೆಹಮಾನ್ ಮತ್ತು ಮಟಿಯಾಲ ಶಾಸಕ ಗುಲಾಬ್ ಸಿಂಗ್ ಯಾದವ್ ಟಿಕೆಟ್ ನಿರಾಕರಣೆಯಾದವರ ಪಟ್ಟಿಯಲ್ಲಿ ಸೇರಿದವರು. ಮುಂಬರುವ ಪಟ್ಟಿಯಲ್ಲಿ ಇತರ ಸ್ಥಾನಗಳಿಂದ ಅವರಿಗೆ ಅವಕಾಶ ಕಲ್ಪಿಸಲಾಗುವುದೇ ಎಂಬ ಕುತೂಹಲ ಮೂಡಿದೆ.

ಸಿಎಂ ಸ್ಥಾನದಿಂದ ಕೇಜ್ರಿವಾಲ್ ಕೆಳಗಿಳಿದ ದಿನದಿಂದಲೇ ಎಎಪಿ ದಿಲ್ಲಿಯಲ್ಲಿ ಮುಂದಿನ ಚುನಾವಣೆಗೆ ತಯಾರಿ ಶುರು ಮಾಡಿದೆ ಎಂದು ಹೇಳಲಾಗುತ್ತಿತ್ತು. ಚುನಾವಣಾ ತಯಾರಿಯ ಭಾಗವಾಗಿಯೇ ಕೇಜ್ರಿವಾಲ್ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿತ್ತು. ಈಗ ನೋಡಿದರೆ ಇನ್ನೂ ಚುನಾವಣೆ ಘೋಷಣೆಯೂ ಆಗದ ಮೊದಲೇ ಹನ್ನೊಂದು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿ ಆಮ್ ಆದ್ಮಿ ಪಕ್ಷ ಈ ಬಾರಿ ದಿಲ್ಲಿ ಗೆಲ್ಲುವಲ್ಲಿ ಸರ್ವ ಪ್ರಯತ್ನ ಹಾಕುವುದು ಖಚಿತವಾಗಿದೆ.

ಮೋದಿ, ಅಮಿತ್ ಶಾ ಅವರ ಚುನಾವಣಾ ತಂತ್ರಗಾರಿಕೆ ಏನಿದ್ದರೂ ದಿಲ್ಲಿಯಲ್ಲಿ ಮಾತ್ರ. ಕೇಜ್ರಿವಾಲ್ ಹಾಗೂ ಅವರ ಪಕ್ಷದ ಸಂಘಟನೆ, ಅದರ ಪ್ರಚಾರ ವೈಖರಿ ಹಾಗು ಅಲ್ಲಿನ ಜನರ ನಡುವೆ ಆ ಪಕ್ಷ ಗಳಿಸಿರುವ ಜನಪ್ರಿಯತೆಯನ್ನು ಎದುರಿಸಿ ಗೆಲ್ಲುವುದು ಬಿಜೆಪಿಗೆ ಬಹಳ ದೊಡ್ಡ ಸವಾಲಾಗಲಿದೆ. ಕೇಜ್ರಿವಾಲ್ ಸಿಎಂ ಸ್ಥಾನದಿಂದ ಇಳಿದು ಜನರ ನಡುವೆ ಇರುವುದೂ ಆಪ್ ಗೆ ಲಾಭ ತರುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News