ಉತ್ತರ ಪ್ರದೇಶ: ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿದ ದಲಿತ ಬಾಲಕಿಯನ್ನು ಬಿಸಿ ಎಣ್ಣೆ ಕಡಾಯಿಗೆ ತಳ್ಳಿದ ದುಷ್ಕರ್ಮಿಗಳು!
ಹೊಸದಿಲ್ಲಿ: 18 ವರ್ಷದ ದಲಿತ ಬಾಲಕಿಯೊಬ್ಬಳು ತನ್ನ ವಿರುದ್ಧದ ಲೈಂಗಿಕ ಕಿರುಕುಳಕ್ಕೆ ಪ್ರತಿರೋಧ ತೋರಿದ್ದಕ್ಕೆ ಆಕೆಯನ್ನು ಬಿಸಿ ಎಣ್ಣೆಯ ಕಡಾಯಿಗೆ ತಳ್ಳಿದ ಆಘಾತಕಾರಿ ಘಟನೆಯೊಂದು ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಈ ಘಟನೆ ನಡೆದಿದ್ದು, ಬಾಲಕಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಆಕೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಸ್ಥಳಾಂತರಿಸಲಾಗಿದೆ.
ಬಾಲಕಿ ಎಣ್ಣೆ ಗಿರಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಪ್ರಕರಣಕ್ಕೆ ಸಂಬಂಧಿಸಿ ಗಿರಣಿ ಮಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬಾಲಕಿಯ ಸಹೋದರ ನೀಡಿದ ದೂರಿನ ಪ್ರಕಾರ, ಆಕೆ ಧನೂರ ಸಿಲ್ವರ್‌ನಗರ ಗ್ರಾಮದ ಆಯಿಲ್ ಮಿಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಗಳಾದ ಗಿರಣಿ ಮಾಲಕ ಪ್ರಮೋದ್ ಮತ್ತು ಸಹಚರರಾದ ರಾಜು ಮತ್ತು ಸಂದೀಪ್ ಕಿರುಕುಳ ನೀಡಿದಾಗ ಆಕೆ ಪ್ರತಿಭಟಿಸಿದ್ದಾಳೆ. ರೊಚ್ಚಿಗೆದ್ದ ಆರೋಪಿಗಳು ಜಾತಿ ನಿಂದನೆ ಮಾಡಿ, ನಂತರ ಅವಳನ್ನು ಬಿಸಿ ಎಣ್ಣೆ ತುಂಬಿದ ಕಡಾಯಿಗೆ ತಳ್ಳಿದ್ದಾರೆ ಎಂದು ಆಕೆಯ ಸಹೋದರ ಹೇಳಿದ್ದಾರೆ.
ಆರೋಪಿಯು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದು, ನಿಂದಿಸಿದ ಬಳಿಕ ಬಿಸಿ ಎಣ್ಣೆಗೆ ದೂಡಿದ್ದಾರೆ ಎಂದು ಸಂತ್ರಸ್ತ ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಬಾಲಕಿಯ ದೇಹದ ಅರ್ಧಕ್ಕಿಂತಲೂ ಹೆಚ್ಚು ಸುಟ್ಟಗಾಯಗಳಾಗಿದ್ದು, ಆಕೆಯ ಕಾಲುಗಳು ಮತ್ತು ಕೈಗಳು ಗಂಭೀರವಾಗಿ ಸುಟ್ಟುಹೋಗಿವೆ.
ಆಕೆಯ ಸಹೋದರನ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಯತ್ನ, ಮಹಿಳೆಯ ಮೇಲೆ ಹಲ್ಲೆ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸರ್ಕಲ್ ಆಫೀಸರ್ ವಿಜಯ್ ಚೌಧರಿ ತಿಳಿಸಿದ್ದಾರೆ.