ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೆ ಜೀವ ಬೆದರಿಕೆ
ತಿರುವನಂತಪುರಂ: ತಿರುವನಂತಪುರಂನಲ್ಲಿರುವ ಪೊಲೀಸ್ ಮುಖ್ಯ ಕಚೇರಿಯು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಜೀವ ಬೆದರಿಕೆ ಒಡ್ಡಿರುವ ಕರೆಯೊಂದನ್ನು ಸ್ವೀಕರಿಸಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ ಎಂದು thehindu.com ವರದಿ ಮಾಡಿದೆ.
ನವೆಂಬರ್ 1ರಂದು ಪೊಲೀಸ್ ಮುಖ್ಯ ಕಚೇರಿಯ ನಿಯಂತ್ರಣ ಕೊಠಡಿಗೆ ಜೀವ ಬೆದರಿಕೆಯ ಫೋನ್ ಕರೆಯನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ವರದಿಗಳ ಪ್ರಕಾರ, ಅಪ್ರಾಪ್ತ ಬಾಲಕನು ಆ ಕರೆಯನ್ನು ಮಾಡಿದ್ದಾನೆ ಎಂಬುದು ನಿಜವೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಪೊಲೀಸರು, ಈ ಕುರಿತು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಫೋನ್ ಬಳಸಿ ಜೀವ ಬೆದರಿಕೆ ಒಡ್ಡಿರುವುದರ ವಿರುದ್ಧ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 118(ಬಿ) ಹಾಗೂ 120(ಒ) ಅಡಿ ಮ್ಯೂಸಿಯಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತಿಳಿದೂ ವದಂತಿಗಳನ್ನು ಹರಡುವುದು ಅಥವಾ ಪೊಲೀಸರು, ಅಗ್ನಿಶಾಮಕ ದಳದವರು ಅಥವಾ ಮತ್ಯಾವುದೇ ಅಗತ್ಯ ಸೇವೆಗಳಿಗೆ ಸುಳ್ಳು ಎಚ್ಚರಿಕೆಗಳನ್ನು ನೀಡುವುದರ ವಿರುದ್ಧ ಸೆಕ್ಷನ್ 118(ಬಿ) ಅಡಿ ಕ್ರಮ ಕೈಗೊಳ್ಳಬಹುದಾದರೆ, ಪುನರಾವರ್ತಿತ ಅಥವಾ ಅನಪೇಕ್ಷಿತ ಕರೆ, ಪತ್ರ, ಬರಹ, ಸಂದೇಶ, ಇಮೇಲ್ ಅಥವಾ ಮೆಸೆಂಜರ್ ಮೂಲಕ ಯಾವುದೇ ವ್ಯಕ್ತಿ ಸ್ವಯಂಪ್ರೇರಿತವಾಗಿ ತೊಂದರೆ ನೀಡಿದರೆ ಅಂಥವರ ವಿರುದ್ಧ ಸೆಕ್ಷನ್ 120(ಒ) ಅಡಿ ಕ್ರಮ ಕೈಗೊಳ್ಳಬಹುದಾಗಿದೆ.