ಟಿಎಂಸಿ ಜೊತೆಗಿನ ಮೈತ್ರಿ ಕುರಿತ ನಿರ್ಧಾರವನ್ನು ಹೈಕಮಾಂಡ್‌ ಮಾಡುತ್ತದೆ, ಅಧೀರ್‌ ರಂಜನ್‌ ಅಲ್ಲ: ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಖರ್ಗೆಯಿಂದ ತೀಕ್ಷ್ಣ ಪ್ರತಿಕ್ರಿಯೆ

Update: 2024-05-18 11:11 GMT

ಮಲ್ಲಿಕಾರ್ಜುನ ಖರ್ಗೆ | PC : ANI 

ಮುಂಬೈ: ತಾನು ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ನಂಬುವುದಿಲ್ಲ ಅವರು ಬಿಜೆಪಿಯತ್ತ ಕೂಡ ವಾಲಬಹುದು, ಎಂದು ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ನೀಡಿದ ಹೇಳಿಕೆಯ ಕುರಿತಂತೆ ಕಟು ಶಬ್ದಗಳಲ್ಲಿ ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯಾವುದೇ ನಿರ್ಧಾರವನ್ನು ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳುತ್ತದೆ, ಅಧೀರ್‌ ರಂಜನ್‌ ಅಲ್ಲ ಎಂದು ಹೇಳಿದ್ದಾರೆ.

“ತಾನು ಇಂಡಿಯಾ ಮೈತ್ರಿಕೂಟಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಆಡಳಿತದ ವೇಳೆ ಕಮ್ಯುನಿಸ್ಟ್‌ ಪಕ್ಷಗಳು ಬಾಹ್ಯ ಬೆಂಬಲ ನೀಡಿದ್ದವು,” ಎಂದು ಖರ್ಗೆ ಹೇಳಿದರು.

“ಅಧೀರ್‌ ರಂಜನ್‌ ಹೇಳಿಕೆ ವಿಚಾರದಲ್ಲಿ ಹೇಳುವುದಾದರೆ, ಅವರು ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿಲ್ಲ. ಪಕ್ಷದ ಪ್ರಮುಖ ನಾಯಕರು ಮತ್ತು ಹೈಕಮಾಂಡ್‌ ನಿರ್ಧರಿಸುತ್ತದೆ. ಇದನ್ನು ಅನುಸರಿಸದೇ ಇರುವವರು ಪಕ್ಷದಿಂದ ಹೊರಗಿರುತ್ತಾರೆ,” ಎಂದು ಖರ್ಗೆ ಹೇಳಿದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರಾಗಿರುವ ಚೌಧುರಿ, ಲೋಕಸಭಾ ಚುನಾವಣೆಯನ್ನು ಪಶ್ಚಿಮ ಬಂಗಾಳದ ಬಹರಾಂಪುರ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News