ಸಬ್ಸಿಡಿ ದರದಲ್ಲಿ ‘ಭಾರತ ಅಕ್ಕಿ’ ಕುರಿತು ಶೀಘ್ರವೇ ನಿರ್ಧಾರ; ವರದಿ
ಹೊಸದಿಲ್ಲಿ: ತನ್ನ ಹೆಚ್ಚುವರಿ ದಾಸ್ತಾನಿನಿಂದ ಅಕ್ಕಿಯನ್ನು ಸಬ್ಸಿಡಿ ದರಗಳಲ್ಲಿ ಚಿಲ್ಲರೆ ಮಾರುಕಟ್ಟೆಗಳಲ್ಲಿ ಮಾರಾಟ ಯೋಜನೆಯ ಬಗ್ಗೆ ಸರಕಾರವು ಒಂದು ವಾರದೊಳಗೆ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ ಎಂದು financialexpress.com ವರದಿ ಮಾಡಿದೆ.
ಪ್ರಸ್ತುತ ಚಿಲ್ಲರೆ ಮಾರಾಟಕ್ಕಾಗಿ ಬೆಲೆ ನಿಗದಿ ಮತ್ತು ಪ್ಯಾಕ್ ಗಾತ್ರ ಸೇರಿದಂತೆ ‘ಭಾರತ ಅಕ್ಕಿ’ ಉಪಕ್ರಮದ ವ್ಯಾಪ್ತಿಯನ್ನು ಚರ್ಚಿಸಲಾಗುತ್ತಿದೆ. ರಫ್ತು ನಿರ್ಬಂಧಗಳು ಮತ್ತು ಭಾರತೀಯ ಆಹಾರ ನಿಗಮ (ಎಫ್ಸಿಐ)ದಿಂದ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟದ ಹೊರತಾಗಿಯೂ ಹೆಚ್ಚಿನ ಮಟ್ಟದಲ್ಲಿಯೇ ಇರುವ ಅಕ್ಕಿಯ ಚಿಲ್ಲರೆ ಮಾರಾಟ ಬೆಲೆಗಳನ್ನು ತಗ್ಗಿಸಲು ಈ ಯೋಜನೆಯನ್ನು ರೂಪಿಸಲಾಗಿದೆ.
ಆದಾಗ್ಯೂ, ಸರಕಾರದಿಂದ ಸಬ್ಸಿಡಿ ದರಗಳಲ್ಲಿ ಅಕ್ಕಿ ಮಾರಾಟದ ಯಶಸ್ಸಿನ ಬಗ್ಗೆ ಮಾರುಕಟ್ಟೆ ಮೂಲಗಳು ಶಂಕೆಯನ್ನು ವ್ಯಕ್ತಪಡಿಸಿವೆ.
ಪ್ರಸ್ತುತ ಸರಕಾರವು ‘ಭಾರತ ದಾಲ್’ ಮತ್ತು ‘ಭಾರತ ಆಟಾ’ ಉಪಕ್ರಮಗಳಡಿ ನಫೆಡ್ ಮತ್ತು ಎನ್ಸಿಸಿಎಫ್ ಮೂಲಕ ಕಡಲೆಬೇಳೆ ಮತ್ತು ಗೋದಿಹುಡಿಯನ್ನು ಪ್ರತಿ ಕೆ.ಜಿ.ಗೆ ಅನುಕ್ರಮವಾಗಿ 60 ರೂ. ಮತ್ತು 27.50 ರೂ.ಗಳ ಸಬ್ಸಿಡಿ ದರಗಳಲ್ಲಿ ಮಾರಾಟ ಮಾಡುತ್ತಿದೆ.
ಎಫ್ಸಿಐನಿಂದ ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ಗೆ 2,900 ರೂ.ಗಳಲ್ಲಿ ಸಗಟು ಖರೀದಿದಾರರಿಗೆ ಹೆಚ್ಚುವರಿ ಅಕ್ಕಿ ಮಾರಾಟಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು 2022-23ರಲ್ಲಿ ಪ್ರತಿ ಕ್ವಿಂಟಲ್ ಅಕ್ಕಿಯ ಉತ್ಪಾದನಾ ವೆಚ್ಚ (3,537 ರೂ.)ಕ್ಕಿಂತ ಕಡಿಮೆಯಾಗಿದೆ. ಆದಾಗ್ಯೂ 2023,ಜುಲೈನಿಂದ ಈವರೆಗೆ ಸಾಪ್ತಾಹಿಕ ಇ-ಹರಾಜುಗಳ ಮೂಲಕ ಮಾರಾಟ ಮಾಡಲು ಉದ್ದೇಶಿಸಿದ್ದ ವಾರ್ಷಿಕ ಐದು ಮಿಲಿಯನ್ ಟನ್ ಪೈಕಿ ಕೇವಲ 0.15 ಮಿಲಿಯನ್ ಟನ್ ಅಕ್ಕಿಯ ಮಾರಾಟ ಮಾತ್ರ ಸಾಧ್ಯವಾಗಿದೆ.
ಡಿಸೆಂಬರ್ ನಲ್ಲಿ ಅಕ್ಕಿಯ ಚಿಲ್ಲರೆ ಮಾರಾಟ ಬೆಲೆಗಳು ಶೇ.12.33ರಷ್ಟು ಏರಿಕೆಯಾಗಿದೆ. ಎಫ್ಸಿಐ ದಾಸ್ತಾನಿನಿಂದ ಹೆಚ್ಚುವರಿ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಸರಕಾರದ ಪ್ರಯತ್ನಗಳ ಹೊರತಾಗಿಯೂ 2022 ಅಕ್ಟೋಬರ್ ನಿಂದ ಬೆಲೆಗಳು ಹೆಚ್ಚಿನ ಮಟ್ಟದಲ್ಲಿಯೇ ಇವೆ.
ಅಕ್ಕಿ ಬೆಲೆಗಳ ಏರಿಕೆ ಸಮಸ್ಯೆಯನ್ನು ಪರಿಶೀಲಿಸುವದಾಗಿ ಮತ್ತು ಅದನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಶನಿವಾರ ಹೇಳಿದ್ದರು.
ಈ ನಡುವೆ ರವಿವಾರ ಎಫ್ಸಿಐನ 60ನೇ ಸ್ಥಾಪನಾ ದಿನ ಸಮಾರಂಭದಲ್ಲಿ ಮಾತನಾಡಿದ ಗೋಯಲ್,ಎಫ್ಸಿಐನ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯು ಗೋದಿ ಮತ್ತು ಅಕ್ಕಿಯಂತಹ ಅಗತ್ಯ ಸರಕುಗಳ ಬೆಲೆಗಳನ್ನು ತಗ್ಗಿಸುವಲ್ಲಿ ಪರಿಣಾಮಕಾರಿ ಸಾಧನವಾಗಿದೆ. ಭಾರತ ಆಟಾ,ಭಾರತ ದಾಲ್ ಮತ್ತು ಈರುಳ್ಳಿ ಹಾಗೂ ಟೊಮೆಟೊಗೆ ಸಂಬಂಧಿಸಿದಂತೆ ಮಧ್ಯಪ್ರವೇಶಗಳು ಬೆಲೆ ಸ್ಥಿರೀಕರಣದಲ್ಲಿ ಕೇಂದ್ರ ಸರಕಾರಕ್ಕೆ ನೆರವಾಗಿವೆ ಎಂದು ತಿಳಿಸಿದರು.