ಭಾರೀ ಮಳೆಯಿಂದ ಉಂಟಾದ ಹಾನಿಯನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಿ: ಕೇಂದ್ರಕ್ಕೆ ಹಿಮಾಚಲ ಮುಖ್ಯಮಂತ್ರಿ ಮನವಿ

Update: 2023-08-18 09:27 GMT

PTI photo

ಹೊಸದಿಲ್ಲಿ: ಹಿಮಾಚಲ ಪ್ರದೇಶ ಸರಕಾರ ಭಾರೀ ಮಳೆಯಿಂದ ಉಂಟಾದ ಗರಿಷ್ಠ ಪ್ರಮಾಣದ  ಹಾನಿಯನ್ನು ರಾಜ್ಯ ವಿಪತ್ತು ಎಂದು ಘೋಷಿಸಿದ್ದು, ಕೇಂದ್ರ ಸರಕಾರವು ಇದನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಬೇಕು ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಶುಕ್ರವಾರ ಆಗ್ರಹಿಸಿದ್ದಾರೆ.

ಈ ಸಂಬಂಧ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ. ಆದಾಗ್ಯೂ, ಹಿಮಾಚಲ ಪ್ರದೇಶದ ವಿಪತ್ತನ್ನು 'ರಾಷ್ಟ್ರೀಯ ವಿಪತ್ತು' ಎಂದು ಘೋಷಿಸಲು ಕೇಂದ್ರದ ಪ್ರತಿಕ್ರಿಯೆಗಾಗಿ ರಾಜ್ಯವು ಕಾಯುತ್ತಿದೆ.

ರವಿವಾರದಿಂದ ಹಿಮಾಚಲ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಶಿಮ್ಲಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದೆ.

ಪಿಟಿಐ ಜೊತೆ ಮಾತನಾಡಿದ ಸುಖವಿಂದರ್ ಸಿಂಗ್ ಸುಖು, "ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ ಹಾಗೂ ರಾಜ್ಯ ಸರಕಾರವು ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ, ವಿಶೇಷವಾಗಿ ಪ್ರವಾಹ ಮತ್ತು ಭೂಕುಸಿತದಿಂದ ಮನೆ ಹಾನಿಗೊಳಗಾದವರಿಗೆ ಸ್ವಂತ ಸಂಪನ್ಮೂಲದಿಂದ ಸಹಾಯ ಮಾಡಲು ಪ್ರಯತ್ನಿಸುತ್ತಿದೆ'' ಎಂದರು.

"ಕೇಂದ್ರ ತಂಡಗಳು ಹಾನಿಯ ಮೌಲ್ಯಮಾಪನಕ್ಕಾಗಿ ಪೀಡಿತ ಪ್ರದೇಶಗಳನ್ನು ಪರಿಶೀಲಿಸಿವೆ ಹಾಗೂ ನಮಗೆ ಕೇಂದ್ರದಿಂದ ಸಮಯೋಚಿತ ಸಹಾಯ ಬೇಕು. ರಾಜ್ಯವು ಅಂದಾಜು 10,000 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ'' ಎಂದು ಸುಖು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News