ಅವಾಮಿ ಲೀಗ್‌ನ ನಾಯಕನ ಕೊಳೆತ ಮೃತದೇಹ ಮೇಘಾಲಯದಲ್ಲಿ ಪತ್ತೆ ?
ಗುವಾಹಟಿ : ಬಾಂಗ್ಲಾದೇಶದ ಅವಾಮಿ ಲೀಗ್‌ನ ನಾಯಕ ಇಶಾಕ್ ಅಲಿ ಪನ್ನಾ ಅವರದ್ದೆಂದು ಶಂಕಿಸಲಾದ ಅರೆ ಕೊಳೆತ ಮೃತದೇಹವೊಂದನ್ನು ಮೇಘಾಲಯ ಪೊಲೀಸರು ಪತ್ತೆ ಮಾಡಿದ್ದಾರೆ.
ಭಾರತ-ಬಾಂಗ್ಲಾದೇಶ ಗಡಿಯಿಂದ ಸುಮಾರು 1.5 ಕಿ.ಮೀ. ದೂರದಲ್ಲಿರುವ ಪೂರ್ವ ಜೈಂಟಿಯಾ ಬೆಟ್ಟ ಜಿಲ್ಲೆಯ ಡೋನಾ ಭೋಯಿ ಪ್ರದೇಶದಲ್ಲಿ ಆಗಸ್ಟ್ 26ರಂದು ಸಂಜೆ ಈ ಮೃತದೇಹ ಪತ್ತೆಯಾಗಿದೆ.
ಮೃತದೇಹ ಪತ್ತೆಯಾಗಿರುವುದನ್ನು ದೃಢಪಡಿಸಿರುವ ಪೊಲೀಸ್ ಅಧೀಕ್ಷಕ ಗಿರಿ ಪ್ರಸಾದ್ ಎಂ., ಅರೆ ಕೊಳೆತ ಸ್ಥಿತಿಯಲ್ಲಿದ್ದ ಅನಾಮಿಕ ಪುರುಷನ ಮೃತದೇಹವೊಂದು ಅಡಿಕೆ ತೋಟದಲ್ಲಿ ಪತ್ತೆಯಾಗಿದೆ. ಮೃತದೇಹದೊಂದಿಗೆ ಇಶಾಕ್ ಅಲಿ ಖಾನ್ ಪನ್ನಾ ಹೆಸರಿನ ಬಾಂಗ್ಲಾದೇಶದ ಪಾಸ್‌ಪೋರ್ಟ್ ಪತ್ತೆಯಾಗಿದೆ. ಮೃತದೇಹವನ್ನು ಕ್ಲಿಯೆಹ್ರಿಯಾತ್‌ನಲ್ಲಿರುವ ನಾಗರಿಕ ಆಸ್ಪತ್ರೆಗೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ ಗುರುತು ಪತ್ತೆ ಹಚ್ಚಲು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
‘ಢಾಕಾ ಟ್ರಿಬ್ಯೂನಲ್’ ಬಾಂಗ್ಲಾದೇಶದ ಛಾತ್ರ ಲೀಗ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಆಗಸ್ಟ್ 24ರಂದು ಮೇಘಾಲಯಕ್ಕೆ ಪರಾರಿಯಾಗಲು ಪ್ರಯತ್ನಿಸಿದ ಸಂದರ್ಭ ಮೃತಪಟ್ಟಿದ್ದಾರೆ. ಮೇಘಾಲಯದ ಬೆಟ್ಟದಲ್ಲಿ ಜಾರಿ ಬಿದ್ದ ಬಳಿಕ ಪನ್ನಾ ಅವರು ಹೃದಾಯಘಾತಕ್ಕೆ ಒಳಗಾಗಿದ್ದಾರೆ. ಈ ಸಂದರ್ಭ ಅವರೊಂದಿಗೆ ಅವಾಮಿ ಲೀಗ್‌ನ ಇನ್ನೋರ್ವ ನಾಯಕ ಇದ್ದರು ಎಂದು ಹೇಳಲಾಗಿದೆ ಎಂದು ಅವಾಮಿ ಲೀಗ್ ನಾಯಕ ಹಾಗೂ ಪನ್ನಾ ಅವರ ಸೋದರಳಿಯ ಲೈಕುಝಮನ್ ತಾಲೂಕ್‌ದಾರ್ ಮಿಂಟೂ ತಿಳಿಸಿದ್ದಾರೆ.
ಆದರೆ, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಈ ವರದಿಯನ್ನು ನಿರಾಕರಿಸಿದೆ.