ಶಾಂತಿ ಸ್ಥಾಪನೆಯ ಕೊಡುಗೆಯಾಗಿ ಮೊಯಿತ್ರಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಿಂತೆಗೆದ ದೆಹದ್ರಾಯಿ

Update: 2024-04-25 15:37 GMT

ಆನಂತ್ ದೆಹದ್ರಾಯಿ ,  ಮಹುವಾ ಮೊಯಿತ್ರಾ | PC : PTI 

ಹೊಸದಿಲ್ಲಿ: ಖ್ಯಾತ ನ್ಯಾಯವಾದಿ ಆನಂತ್ ದೆಹದ್ರಾಯಿ ಅವರು ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ‘ಶಾಂತಿಯ ಕೊಡುಗೆ’ಯಾಗಿ ಗುರುವಾರ ಹಿಂತೆಗೆದುಕೊಂಡಿದ್ದಾರೆ.

ಮಹುವಾ ಮೊಯಿತ್ರಾ ಅವರು ಲೋಕಸಭೆಯಲ್ಲಿ ಕೆಲವು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳುವುದಕ್ಕಾಗಿ ಹೀರಾನಂದಾನಿ ಗ್ರೂಪ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್ ಹೀರಾನಂದಾನಿ ಅವರಿಂದ ಲಂಚಗಳನ್ನು ಪಡೆದುಕೊಳ್ಳುತ್ತಿದ್ದರೆಂದು ದೆಹದ್ರಾಯಿ ಅವರು ಆಪಾದಿಸಿದ್ದರು. ಆನಂತರ ಇದು ವ್ಯಾಪಕ ವಿವಾದವಾಗಿ ಮಹುವಾ ಮೊಯಿತ್ರಾ ಅವನ್ನು ಲೋಕಸಭೆಯಿಂದ ಉಚ್ಚಾಟಿಸಲಾಯಿತು.

ಈ ವರ್ಷದ ಆರಂಭದಲ್ಲಿ ದೆಹದ್ರಾಯಿ ಅವರು ವಿಶೇಷ ನ್ಯಾಯಾಲಯದ ಮೆಟ್ಟಲೇರಿ, ತಾನು ಮೊಯಿತ್ರಾ ವಿರುದ್ಧ ‘ಪ್ರಶ್ನೆಗಾಗಿ ಲಂಚ’ ಆರೋಪ ಮಾಡಿದ ಬಳಿಕ ಆಕೆ ತನ್ನ ಬಗ್ಗೆ ಸುಳ್ಳು, ನಿಂದನಾತ್ಮಕ ಹಾಗೂ ಮಾನಾಹಾನಿಕರ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಆಪಾದಿಸಿದ್ದರು ಮತ್ತು ಆಕೆಯ ವಿರುದ್ಧ 2 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಒಂದು ವೇಳೆ ಮೊಯಿತ್ರಾ ಅವರು ತನ್ನ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡುವುದಿಲ್ಲವೆಂದು ಮುಚ್ಚಳಿಕೆಯನ್ನು ಬರೆದುಕೊಟ್ಟರೆ, ಪರಿಸ್ಥಿತಿಯನ್ನು ತಿಳಿಗೊಳಿಸುವ ಉದ್ದೇಶದಿಂದ ಹಾಲಿ ಪ್ರಕರಣಕ್ಕೆ ಅಂತ್ಯ ಹಾಡಲು ಬಯಸುವುದಾಗಿ ದೆಹದ್ರಾಯಿ ಅವರ ನ್ಯಾಯವಾದಿ ತಿಳಿಸಿದು

ಇತ್ತಂಡಗಳ ನಡುವೆ ಇತ್ಯರ್ಥಪಡಿಸಬಹುದಾದಂತಹ ವಿವಾದಗಳಿಗಾಗಿ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡದಿರುವುದು ಉತ್ತಮವೆಂದು ಪ್ರತಿಪಾದಿಸಿದ ನ್ಯಾಯಮೂರ್ತಿ ಪ್ರತೀಕ್ ಜಲಾನ್ ಅವರು, ಒಂದು ಈ ಚಕಮಕಿಯನ್ನು ನಿಲ್ಲಿಸಲು ಇದರಿಂದ ಸಾಧ್ಯವಾಗುವುದಿದ್ದಲ್ಲಿ, ಈ ಸಲಹೆಯನ್ನು ಸ್ವಾಗತಿಸುವುದಾಗಿ ತಿಳಿಸಿದರು.

ನ್ಯಾಯಾಲಯದಲ್ಲಿ ಉಪಸ್ಥಿತರಿದ್ದ ದೆಹದ್ರಾಯಿ ಅವರು ಬಳಿಕ ಹೇಳಿಕೆಯೊಂದನ್ನು ನೀಡಿ, ಮೊಯಿತ್ರಾ ವಿರುದ್ಧದ ಕಾನೂನು ಮೊಕದ್ದಮೆಯನ್ನು ನಿಶ್ಶರ್ತವಾಗಿ ಹಿಂಪಡೆಯುವುದಾಗಿ ಹೇಳಿದರು.

‘‘ನಾನು ಪ್ರಕರಣವನ್ನು ಹಿಂಪಡೆಯಲು ಇಚ್ಛಿಸುತ್ತೇನೆ. ಶಾಂತಿಯ ಕೊಡುಗೆಯಾಗಿ ನಾನು ಪ್ರಕರಣವನ್ನು ಹಿಂತೆಗೆದುಕೊಳ್ಳುತ್ತೇನೆ ’’ಎಂದು ದೆಹದ್ರಾಯಿ ತಿಳಿಸಿರುವುದಾಗಿ ಅವರ ವಕೀಲ ರಾಘವ್ ಅವಸ್ಥಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News