ದಿಲ್ಲಿ | ಅತಿಕ್ರಮಣಗೊಂಡಿದ್ದ 2,000 ಕೋಟಿ ರೂ.ಮೌಲ್ಯದ ಸರಕಾರಿ ಜಮೀನು ತೆರವು
ಹೊಸದಿಲ್ಲಿ : ಸರಕಾರಿ ಭೂಮಿಯ ಅತಿಕ್ರಮಣದ ವಿರುದ್ಧ ಪ್ರಮುಖ ಕಾರ್ಯಾಚರಣೆಯಲ್ಲಿ ಕೇಂದ್ರನಗರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧೀನದ ಭೂ ಮತ್ತು ಅಭಿವೃದ್ಧಿ ಕಚೇರಿ (ಎಲ್ ಆ್ಯಂಡ್ ಡಿ ಒ)ಯು ಶನಿವಾರ ದಿಲ್ಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಖೈಬರ್ ಪಾಸ್‌ನಲ್ಲಿಯ ಸುಮಾರು 15 ಎಕರೆ ಜಮೀನಿನಲ್ಲಿ ವಾಸವಾಗಿದ್ದ ಅತಿಕ್ರಮಣಕಾರರನ್ನು ತೆರವುಗೊಳಿಸಿದೆ.
ತೆರವುಗೊಳಿಸಲಾದ ಭೂಮಿ ಸೇರಿದಂತೆ ಸುಮಾರು 32 ಎಕರೆ ವಿಸ್ತೀರ್ಣದ ಈ ಪ್ರದೇಶದ ಪ್ರಸ್ತುತ ಮಾರುಕಟ್ಟೆ ಮೌಲ್ಯ 2,000 ಕೋಟಿ ರೂ.ಗೂ ಅಧಿಕವಿದೆ ಎಂದು ಬಲ್ಲ ಮೂಲಗಳು ತಿಳಿಸಿದವು. ಎಲ್ ಆ್ಯಂಡ್ ಡಿ ಒ ಒಡೆತನದ ಈ ಸರಕಾರಿ ಭೂಮಿಯನ್ನು 1935ರಲ್ಲಿ ರಕ್ಷಣಾ ಸಚಿವಾಲಯಕ್ಕೆ ನೀಡಲಾಗಿತ್ತು. ಖೈಬರ್ ಪಾಸ್ ಹಾಸ್ಟೆಲ್ ಎಂದು ಕರೆಯಲಾಗುವ ಇಲ್ಲಿ ರಕ್ಷಣಾ ಅಧಿಕಾರಿಗಳ ಸಹಾಯಕ ಸಿಬ್ಬಂದಿಗಳಿಗಾಗಿ ಗುಡಿಸಲುಗಳು ನಿರ್ಮಾಣಗೊಂಡಿದ್ದವು. ತೆರವುಗೊಳಿಸಲಾಗಿರುವ ಭಾಗವು ಸುಮಾರು 1,000 ಕೋಟಿ ರೂ.ಮೌಲ್ಯದ್ದಾಗಿದೆ.
ಮಾ.4ರಿಂದ ತೆರವು ಕಾರ್ಯಾಚರಣೆ ಆರಂಭಗೊಳ್ಳಬೇಕಿತ್ತು, ಆದರೆ ದಿಲ್ಲಿ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಅದನ್ನು ತಡೆಹಿಡಿಯಲಾಗಿತ್ತು. ಉಚ್ಚ ನ್ಯಾಯಾಲಯವು ಜು.9ರಂದು ತೆರವು ಆದೇಶವನ್ನು ಎತ್ತಿ ಹಿಡಿದು ತೀರ್ಪು ನೀಡಿದ ಬಳಿಕ ಎಲ್ ಆ್ಯಂಡ್ ಡಿ ಒ ಶನಿವಾರ ತೆರವು ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇಲ್ಲಿಯ ಕೆಲ ನಿವಾಸಿಗಳು ತೆರವು ಆದೇಶವನ್ನು ವಿರೋಧಿಸಿ ಮಾರ್ಚ್‌ನಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು. ಹಾಸ್ಟೆಲ್‌ಗಳು ಸುಮಾರು 70 ವರ್ಷಗಳ ಹಿಂದೆ ತಮ್ಮ ತಂದೆ, ಅಜ್ಜಂದಿರಿಗೆ ಹಂಚಿಕೆಯಾಗಿದ್ದವು. ಹೀಗಾಗಿ ತಾವು ಪುನರ್ವಸತಿಗೆ ಅರ್ಹರಾಗಿದ್ದೆವು ಎಂದು ಅವರು ಪ್ರತಿಪಾದಿಸಿದ್ದರು.
ಸಶಸ್ತ್ರ ಪಡೆಗಳ ಅಧಿಕಾರಿಗಳು ತಮ್ಮನ್ನು ನೇಮಿಸಿಕೊಂಡಿದ್ದು, ತಾವು ಬಾಡಿಗೆಯನ್ನೂ ಪಾವತಿಸುತ್ತಿದ್ದೇವೆ. ಹೀಗಾಗಿ ಕಾನೂನು ಪ್ರಕ್ರಿಯೆಯನ್ನು ಅನುಸರಿಸಿ ತಮ್ಮನ್ನು ಹೊರಹಾಕಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.