ದಿಲ್ಲಿ ಕೋಚಿಂಗ್ ಸೆಂಟರ್ ಐಎಎಸ್ ಆಕಾಂಕ್ಷಿಗಳು ಸಾವು: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಿಜೆಐಗೆ ವಿದ್ಯಾರ್ಥಿಯ ಪತ್ರ

Update: 2024-07-29 10:39 GMT

PC : NDTV 

ಹೊಸದಿಲ್ಲಿ: ಪೂರ್ವ ದಿಲ್ಲಿಯ ಕೋಚಿಂಗ್ ಸೆಂಟರ್‌ನಲ್ಲಿ ಸಂಭವಿಸಿದ ಮೂವರು ಐಎಎಸ್ ಆಕಾಂಕ್ಷಿಗಳ ಸಾವಿಗೆ ಕಾರಣರಾದ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಇತರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿ ಅವಿನಾಶ ದುಬೆಯವರು ಭಾರತದ ಮುಖ್ಯ ನ್ಯಾಯಾಧೀಶ(ಸಿಜೆಐ) ಡಿ.ವೈ.ಚಂದ್ರಚೂಡ್ ಅವರಿಗೆ ಸೋಮವಾರ ಪತ್ರವನ್ನು ಬರೆದಿದ್ದಾರೆ. ಶನಿವಾರ ರಾತ್ರಿ ಭಾರೀ ಮಳೆಯಿಂದಾಗಿ ಕೋಚಿಂಗ್ ಸೆಂಟರ್ ಕಟ್ಟಡದ ತಳಅಂತಸ್ತಿನಲ್ಲಿಯ ಗ್ರಂಥಾಲಯಕ್ಕೆ ನೆರೆ ನೀರು ನುಗ್ಗಿದ ಪರಿಣಾಮ ಮೂರು ಯುವಜೀವಗಳು ಉಸಿರು ಕಳೆದುಕೊಂಡಿದ್ದವು.

ರಾಜೇಂದ್ರ ನಗರ ಮತ್ತು ಮುಖರ್ಜಿ ನಗರಗಳಂತಹ ಪ್ರದೇಶಗಳಲ್ಲಿ ಕಳಪೆ ಮೂಲಸೌಕರ್ಯಗಳ ಬಗ್ಗೆ ತನ್ನ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿರುವ ದುಬೆ,ವಿದ್ಯಾರ್ಥಿಗಳ ಮೂಲಭೂತ ಹಕ್ಕುಗಳ ರಕ್ಷಣೆಗೆ ಆಗ್ರಹಿಸಿದ್ದಾರೆ. ಒಳಚರಂಡಿ ಸಮಸ್ಯೆಗಳಿಂದಾಗಿ ಉಂಟಾಗುವ ನೆರೆಗಳು ಮತ್ತು ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಈ ಪ್ರದೇಶಗಳ ನಿವಾಸಿಗಳು ಆಗಾಗ್ಗೆ ಸಂಕಷ್ಟವನ್ನು ಎದುರಿಸುತ್ತಿರುತ್ತಾರೆ ಎಂದು ಅವರು ಬೆಟ್ಟು ಮಾಡಿದ್ದಾರೆ.

ಈ ಪ್ರದೇಶಗಳಲ್ಲಿಯ ಒಳಚರಂಡಿಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಕಿರಿದಾದ ಮತ್ತು ಜನಸಂದಣಿಯಿಂದ ಕೂಡಿರುವ ಇಲ್ಲಿನ ಹೆಚ್ಚಿನ ರಸ್ತೆಗಳು ಮಳೆಯಿಂದಾಗಿ ನೀರು ಮತ್ತು ಸಂಸ್ಕರಿಸದ ಒಳಚರಂಡಿ ತ್ಯಾಜ್ಯಗಳ ಮಿಶ್ರಣ ತುಂಬಿರುತ್ತದೆ ಎಂದು ಹೇಳಿರುವ ದುಬೆ, ಕೆಲವೊಮ್ಮೆ ನೆರೆನೀರು ಮತ್ತು ಒಳಚರಂಡಿ ತ್ಯಾಜ್ಯ ಮನೆಗಳಿಗೂ ನುಗ್ಗುತ್ತದೆ ಎಂದು ದೂರಿದ್ದಾರೆ.

ಮೊಣಕಾಲು ಮಟ್ಟದ ಚರಂಡಿ ನೀರಿನಲ್ಲಿ ಸಂಚರಿಸುವಂತಾಗಿರುವ ಬಗ್ಗೆ ಹತಾಶೆ ವ್ಯಕ್ತಪಡಿಸಿರುವ ಅವರು,ನಿರ್ಲಕ್ಷ್ಯಕ್ಕಾಗಿ ಆಪ್ ನಿಯಂತ್ರಣದಲ್ಲಿರುವ ದಿಲ್ಲಿ ಸರಕಾರ ಮತ್ತು ಮನಪಾ ಅಧಿಕಾರಿಗಳನ್ನು ಟೀಕಿಸಿದ್ದಾರೆ. ಈ ನಿರ್ಲಕ್ಷ್ಯದಿಂದಾಗಿ ವಿದ್ಯಾರ್ಥಿಗಳು ಕಷ್ಟದ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಹೇಳಿರುವ ದುಬೆ, ಈ ವಿದ್ಯಾರ್ಥಿಗಳ ಬದುಕನ್ನು ‘ಕೀಟಗಳಿಗೆ’ ಹೋಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News