ನಿಮಗೆ ಇದರಲ್ಲಿ ಯಾವುದೇ ಪಾತ್ರವಿಲ್ಲ, ಕೇಜ್ರಿವಾಲ್ ಮನವಿಗೆ ಆಕ್ಷೇಪಿಸುವಂತಿಲ್ಲ: ಈಡಿಗೆ ಹೇಳಿದ ದಿಲ್ಲಿ ಕೋರ್ಟ್

ಅರವಿಂದ್ ಕೇಜ್ರಿವಾಲ್ (PTI)
ಹೊಸದಿಲ್ಲಿ: ತಿಹಾರ್ ಜೈಲಿನಲ್ಲಿ ವೈದ್ಯಕೀಯ ತಪಾಸಣೆಗೆ ಸಂಬಂಧಿಸಿದಂತೆ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮಾಡಿರುವ ಮನವಿಗೆ ಆಕ್ಷೇಪಿಸುವಂತಿಲ್ಲ ಎಂದು ದಿಲ್ಲಿಯ ನ್ಯಾಯಾಲಯವೊಂದು ಇಂದು ಜಾರಿ ನಿರ್ದೇಶನಾಲಯಕ್ಕೆ ಹೇಳಿದೆ. ದಿಲ್ಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
“ಆರೋಪಿ (ಕೇಜ್ರಿವಾಲ್) ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ, ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿಲ್ಲ. ಅವರಿಗೆ ಏನಾದರೂ ಪರಿಹಾರ ಬೇಕಿದ್ದರೆ, ನಿಮಗೆ ಇದರಲ್ಲಿ ಯಾವುದೇ ಪಾತ್ರವಿಲ್ಲ.” ಎಂದು ನ್ಯಾಯಾಧೀಶ ಮುಕೇಶ್ ಕುಮಾರ್ ಹೇಳಿದರಲ್ಲದೆ ವೈದ್ಯಕೀಯ ತಪಾಸಣೆ ನಡಯುವ ಸಂದರ್ಭ ವೀಡಿಯೋ ಕಾನ್ಫರೆನ್ಸ್ ಮೂಲಕ ಪತ್ನಿಯೂ ಸೇರಿಕೊಳ್ಳಬೇಕೆಂದು ಕೋರಿ ಕೇಜ್ರಿವಾಲ್ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯಿಸುವಂತೆ ಜೈಲಿನ ಅಧೀಕ್ಷಕರಿಗೆ ಸೂಚಿಸಿದರು.
ಸಾಮಾನ್ಯ ಜಾಮೀನು ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ಜೂನ್ 19ಕ್ಕೆ ವಿಚಾರಣೆಗೆ ಬರಲಿದೆ. ದಿಲ್ಲಿಯ ನ್ಯಾಯಾಲಯ ಈ ಹಿಂದೆ ಅವರಿಗೆ ಮಧ್ಯಂತರ ಜಾಮೀನು ನಿರಾಕರಿಸಿತ್ತಲ್ಲದೆ ಅವರು ನಿರಂತರ ಚುನಾವಣಾ ಪ್ರಚಾರದಲ್ಲಿ ತೊಡಗಿರುವುದು ಅವರಿಗೆ ಗಂಭೀರ ಆರೋಗ್ಯ ಸಮಸ್ಯೆಯಿಲ್ಲ ಎಂಬುದನ್ನು ಸೂಚಿಸಿದೆ ಎಂದು ಹೇಳಿದೆ.