ಶಂಭು ಗಡಿ ತೆರೆದಾಗ ದಿಲ್ಲಿ ಪ್ರವೇಶ : ರೈತ ನಾಯಕ ಜಗಜೀತ್ ಸಿಂಗ್ ಡಲ್ಲೇವಾಲ್
ಚಂಡಿಗಢ : ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಾಪಿಸಲಾಗಿರುವ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದಾಗ ಹರ್ಯಾಣದ ಅಂಬಾಲದ ಸಮೀಪದ ಶಂಭು ಗಡಿಯಲ್ಲಿರುವ ರೈತರು ದಿಲ್ಲಿಗೆ ಪ್ರವೇಶಿಸಲಿದ್ದಾರೆ ಎಂದು ರೈತ ನಾಯಕ ಜಗಜೀತ್ ಸಿಂಗ್ ಡಲ್ಲೇವಾಲ್ ಮಂಗಳವಾರ ತಿಳಿಸಿದ್ದಾರೆ.
ಶಂಭು ಗಡಿಯಲ್ಲಿ ಅಳವಡಿಸಲಾಗಿರುವ ಬ್ಯಾರಿಕೇಡ್‌ಗಳನ್ನು ಪ್ರಾಯೋಗಿಕ ನೆಲೆಯಲ್ಲಿ ತೆರವುಗೊಳಿಸುವಂತೆ ಪಂಜಾಬ್ ಹಾಗೂ ಹರ್ಯಾಣ ಉಚ್ಚ ನ್ಯಾಯಾಲಯ ಹರ್ಯಾಣ ಸರಕಾರಕ್ಕೆ ಸೂಚಿಸಿದ ಬಳಿಕ ಜಗಜೀತ್ ಸಿಂಗ್ ಡೆಲ್ಲೇವಾಲ್ ಈ ಹೇಳಿಕೆ ನೀಡಿದ್ದಾರೆ.
ಮಂಗಳವಾರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಡಲ್ಲೇವಾಲ್, ಬೆಳೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಗೆ ಕಾನೂನಾತ್ಮಕ ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಬೆಂಬಲಿಸುವ ‘‘ದಿಲ್ಲಿ ಚಲೋ’’ ಕಾರ್ಯಕ್ರಮದ ಭಾಗವಾಗಿ ರೈತರು ದಿಲ್ಲಿಯತ್ತ ತೆರಳಲಿದ್ದಾರೆ ಎಂದರು.
ಹೆದ್ದಾರಿ ತೆರೆದಾಗ, ದಿಲ್ಲಿಯತ್ತ ತೆರಳಬೇಕು ಎಂಬುದು ನಮ್ಮ ನಿರ್ಧಾರವಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ನಾಯಕ ಡಲ್ಲೇವಾಲ್ ತಿಳಿಸಿದರು.
ಬೇಡಿಕೆಗಳು ಈಡೇರುವ ವರೆಗೆ ನಾವು ಚಳವಳಿಯನ್ನು ಮುಂದುವರಿಸಲಿದ್ದೇವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ನಡುವೆ ಉಚ್ಚ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹರ್ಯಾಣ ಸರಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದೆ. ನ್ಯಾಯವಾದಿ ಅಕ್ಷಯ್ ಅಮೃತಾಂಶು ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ಹರ್ಯಾಣ ಸರಕಾರ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದರೆ, ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ ಎಂದು ಪ್ರತಿಪಾದಿಸಿದೆ.