ದಿಲ್ಲಿ ಅಬಕಾರಿ ನೀತಿ ಹಗರಣ: BRS ನಾಯಕಿ ಕೆ.ಕವಿತಾಗೆ ಎಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನ
ಹೊಸದಿಲ್ಲಿ: ದಿಲ್ಲಿ ಅಬಕಾರಿ ನೀತಿಯೊಂದಿಗೆ ಸಂಬಂಧ ಹೊಂದಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ದಿಲ್ಲಿಯ ನ್ಯಾಯಾಲಯವೊಂದು BRS ನಾಯಕಿ ಕೆ.ಕವಿತಾ ಅವರನ್ನು ಎಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜಾರಿ ನಿರ್ದೇಶನಾಲಯವು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿಯೂ ಆದ ಕೆ.ಕವಿತಾ ಅವರನ್ನು ಬಂಧಿಸಿದ ನಂತರ, ತಿಹಾರ್ ಜೈಲಿನಲ್ಲಿಡಲಾಗಿದ್ದ ಅವರನ್ನು ಮತ್ತೆ ಬಂಧಿಸಲಾಗಿತ್ತು.
ಮೂರು ದಿನಗಳ ಕಸ್ಟಡಿಯ ನಂತರ ಸಿಬಿಐ ಕೆ.ಕವಿತಾರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತು.
ಇನ್ನು ಮುಂದೆ ಕೆ.ಕವಿತಾ ಅವರು ಕಸ್ಟಡಿ ವಿಚಾರಣೆಗೆ ಅಗತ್ಯವಿಲ್ಲ ಎಂದು ನ್ಯಾಯಾಲಯಕ್ಕೆ ಸಿಬಿಐ ತಿಳಿಸಿತು. ಕವಿತಾರನ್ನು ದೀಪಕ್ ನಗರ್ ರೊಂದಿಗೆ ಪ್ರತಿನಿಧಿಸುತ್ತಿರುವ ವಕೀಲ ನಿತೇಶ್ ರಾಣಾ ಅವರು ಪೊಲೀಸರ ಮನವಿಯನ್ನು ವಿರೋಧಿಸಿ, ಆಕೆ ಇನ್ನು ಕಸ್ಟಡಿ ವಿಚಾರಣೆಗೆ ಅಗತ್ಯವಿಲ್ಲದೆ ಇರುವುದರಿಂದ ಆಕೆಯನ್ನು ಕಸ್ಟಡಿಯಲ್ಲಿಡಲು ಯಾವುದೇ ಸೂಕ್ತ ನೆಲೆಗಳಿಲ್ಲ ಎಂದು ವಾದಿಸಿದರು.
ಇದಕ್ಕೂ ಮುನ್ನ, ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಜೈಲಿನೊಳಗೆ ಕವಿತಾರನ್ನು ಸಿಬಿಐ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದರು. ಈ ಸಂದರ್ಭದಲ್ಲಿ ಸಹ ಆರೋಪಿ ಬುಚಿ ಬಾಬು ಫೋನ್ ನಿಂದ ವಶಪಡಿಸಿಕೊಳ್ಳಲಾಗಿರುವ ವಾಟ್ಸ್ ಆ್ಯಪ್ ಚಾಟ್ ಗಳು ಹಾಗೂ ಭೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳ ಕುರಿತು ಅವರನ್ನು ಪ್ರಶ್ನಿಸಿದ್ದರು. ಇದಾದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಅಬಕಾರಿ ಲಾಬಿಯ ಪರವಾಗಿ ಅಬಕಾರಿ ನೀತಿಯನ್ನು ರೂಪಿಸಲು ಆಮ್ ಆದ್ಮಿ ಪಕ್ಷಕ್ಕೆ ರೂ. 100 ಕೋಟಿ ಕಿಕ್ ಬ್ಯಾಕ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಮಾರ್ಚ್ 15ರಂದು ಕವಿತಾರ ಬಂಜಾರ ಹಿಲ್ಸ್ ನಿವಾಸದಿಂದ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು.