ಕುಕಿ ಪ್ರಾಬಲ್ಯದ ಐದು ಜಿಲ್ಲೆಗಳಲ್ಲಿ ಪ್ರತ್ಯೇಕ ಆಡಳಿತ ಹುದ್ದೆಗಳ ಸೃಷ್ಟಿಗೆ ಆಗ್ರಹ: ಪ್ರಧಾನಿ ಮೋದಿಗೆ ಮಣಿಪುರದ 10 ಶಾಸಕರ ಪತ್ರ

Update: 2023-08-17 17:45 GMT

Photo: PTI 

ಇಂಫಾಲ: ತಮ್ಮ ಬುಡಕಟ್ಟು ಸಮುದಾಯದ ಪ್ರಾಬಲ್ಯವಿರುವ ಐದು ಜಿಲ್ಲೆಗಳಲ್ಲಿ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಪ್ರತ್ಯೇಕ ಆಡಳಿತಾತ್ಮಕ ಹುದ್ದೆಗಳನ್ನು ಸೃಷ್ಟಿಸಬೇಕೆಂದು ಮಣಿಪುರದ ಎಲ್ಲಾ 10 ಮಂದಿ ಕುಕಿ ಶಾಸಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಬುಧವಾರ ಆಗ್ರಹಿಸಿದ್ದಾರೆ.

ಚುರಾಚಂದಪುರ,ಕಾಂಗ್ಪೊಕ್ಪಿ, ಚಾಂಡೆಲ್,ತೆಂಗ್ನೌಪಾಲ್ ಹಾಗೂ ಫೆರ್ಜ್ವಾಲ್ ಜಿಲ್ಲೆಗಳಲ್ಲಿ ಪ್ರತ್ಯೇಕ ಆಡಳಿತಾತ್ಮಕ ಹುದ್ದೆಗಳ ರಚನೆಯಾಗಬೇಕೆಂದು ಅವರು ಆಗ್ರಹಿಸಿದ್ದಾರೆ.

ಮೇ 3ರಿಂದೀಚೆಗೆ ಮಣಿಪುರದ ವಿವಿಧೆಡೆ ಕುಕಿಗಳು ಹಾಗೂ ಮೈತೈಗಳ ನಡುವೆ ಜನಾಂಗೀಯ ಹಿಂಸಾಚಾರ ಅಬಾಧಿತವಾಗಿ ಮುಂದುವರಿದಿರುವಂತೆಯೇ ಕುಕಿ ಶಾಸಕರು ಈ ಬೇಡಿಕೆಯನ್ನು ಮಂಡಿಸಿದ್ದಾರೆ.

ಆಡಳಿತಾರೂಢ ಬಿಜೆಪಿಯ 8 ಮಂದಿ ಸೇರಿದಂತೆ ಕುಕಿ ಬುಡಕಟ್ಟು ಸಮುದಾಯದ 10 ಮಂದಿ ಶಾಸಕರು ಪ್ರಧಾನಿಗೆ ಪತ್ರ ಬರೆದಿದ್ದು, ಈ ಐದು ಜಿಲ್ಲೆಗಳಲ್ಲಿ ಸರಕಾರಿ ಉದ್ಯೋಗಿಗಳು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಕುಕಿ-ರೆ ಬುಡಕಟ್ಟು ಪಂಗಡಗಳವರು ಮೈತೈ ಗುಂಪುಗಳಿಂದ ದಬ್ಬಾಳಿಕೆ, ಚಿತ್ರಹಿಂಸೆ ಹಾಗೂ ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆಂದು ಆರೋಪಿಸಿದ್ದಾರೆ.

ಹಿಂಸಾಚಾರದಿಂದಾಗಿ ಕುಕಿ-ಝೊ ಸಮುದಾಯದ ಉದ್ಯೋಗಿಗಳಿಗೆ ಇಂಪಾಲಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ. ದಕ್ಷ ಆಡಳಿತವನ್ನು ಖಾತರಿಪಡಿಸಲು ಈ ಐದು ಜಿಲ್ಲೆಗಳಲ್ಲಿ ಪ್ರತ್ಯೇಕವಾದ ಹುದ್ದೆಗಳನ್ನು ಸೃಷ್ಟಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಕುಕಿ-ಝೊ ಬುಡಕಟ್ಟುಗಳ ವಿರುದ್ಧ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು ಸಮರ ಸಾರಿದ್ದಾರೆ. ಹೆಚ್ಚುಕಮ್ಮಿ ಪ್ರತಿದಿನವೂ ಗುಡ್ಡಗಾಡು ಜಿಲ್ಲೆಗಳಲ್ಲಿ ಗ್ರಾಮಗಳ ಮೇಲೆ ದಾಳಿ ನಡೆಸುವ ಮೂಲಕ ಕುಕಿ-ಝೊ ಬುಡಕಟ್ಟು ಜನರ ವಿರುದ್ಧ ಸಮರ ಸಾರಿದ್ದಾರೆ ಎಂದರು.

‘‘ಕುಕಿ ಝೊ ಬುಡಕಟ್ಟು ಸಮುದಾಯಕ್ಕೆ ಸೇರಿದ ಐಎಎಸ್ (ಭಾರತೀಯ ಆಡಳಿತ ಸೇವೆ) ಹಾಗೂ ಎಂ.ಸಿಎಸ್. (ಮಣಿಪುರ ನಾಗರಿಕ ಸೇವೆ) ಅಧಿಕಾರಿಗಳು ಹಾಗೂ ಐಪಿಎಸ್ ( ಭಾರತೀಯ ಪೊಲೀಸ್ ಸೇವೆ) ಹಾಗೂ ಎಂ.ಪಿ.ಎಸ್. (ಮಣಿಪುರ ಪೊಲೀಸ್ ಸೇವೆ) ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಹಾಗೂ ತಮ್ಮ ಕರ್ತವ್ಯಗಳನ್ನು ನೆರವೇರಿಸಲು ಸಾಧ್ಯವಾಗುತ್ತಿಲ್ಲ. ಇಂಫಾಲ ಕಣಿವೆಯು ನಮಗೆ ಸಾವಿನ ಕಣಿವೆಯಾಗಿಬಿಟ್ಟಿದೆ’’ 10 ಮಂದಿ ಕುಕಿ ಜೋ ಪಂಗಡದ ಶಾಸಕರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News