ನಿಗದಿತ ವಿಮಾನ ರದ್ದುಗೊಳಿಸಿ ಟೀಂ ಇಂಡಿಯಾ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿದ ಏರ್ ಇಂಡಿಯಾ: ವರದಿ ಕೇಳಿದ ಡಿಜಿಸಿಎ
ಹೊಸದಿಲ್ಲಿ: ನೆವಾರ್ಕ್‌ನಿಂದ ಹೊಸದಿಲ್ಲಿ ನಡುವೆ ಹಾರಾಟ ನಡೆಸಬೇಕಿದ್ದ ಏರ್ ಇಂಡಿಯಾದ ಸಾಮಾನ್ಯ ಪ್ಯಾಸೆಂಜರ್ ವಿಮಾನವನ್ನು ಜುಲೈ 2ರಂದು ರದ್ದುಗೊಳಿಸಿ ಭಾರತದ ಕ್ರಿಕೆಟ್ ತಂಡವನ್ನು ಸ್ವದೇಶಕ್ಕೆ ಕರೆತರುವ ಉದ್ದೇಶದಿಂದ ಬಾರ್ಬಡೋಸ್‌ಗೆ ಡೈವರ್ಟ್ ಮಾಡಿದ ಏರ್ ಇಂಡಿಯಾ ಕ್ರಮದ ಕುರಿತಂತೆ ಡಿಜಿಸಿಎ ಏರ್ ಇಂಡಿಯಾದಿಂದ ವರದಿ ಕೇಳಿದ.
ಏರ್ ಇಂಡಿಯಾದ ಕ್ರಮವ ಆ ವಿಮಾನದಲ್ಲಿ ಪ್ರಯಾಣಿಸಬೇಕಿದ್ದವರಿಗೆ ಅನಾನುಕೂಲತೆ ಸೃಷ್ಟಿಸಿತ್ತು ಹಾಗೂ ಅವರಿಗೆ ಪರ್ಯಾಯ ವಿಮಾನವನ್ನು ಏರ್ ಇಂಡಿಯಾ ಒದಗಿಸಿರಲಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಟಿ20 ವಿಶ್ವ ಕಪ್ ವಿಜೇತ ಭಾರತೀಯ ಕ್ರಿಕೆಟ್ ತಂಡವನ್ನು ಸ್ವದೇಶಕ್ಕೆ ವಾಪಸ್ ಕರೆತರಲು ಏರ್ ಇಂಡಿಯಾ ಕೈಗೊಂಡ ಈ ಕ್ರಮ ಇದೀಗ ವಿವಾದಕ್ಕೀಡಾಗಿದೆ. ಏರ್ ಇಂಡಿಯಾದಿಂದ ಡಿಜಿಸಿಎ ಈಗ ವಿಸ್ತೃತ ವರದಿ ಕೇಳಿದೆ.
ಬಿಸಿಸಿಐ ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸಿ ಏರ್ ಇಂಡಿಯಾ ಚಾರ್ಟರ್ ಆಧಾರದಲ್ಲಿ ಈ ವಿಮಾನ ಒದಗಿಸಿತ್ತು. ಆದರೆ ಡಿಜಿಸಿಎ 2017 ನಿಯಮಗಳ ಪ್ರಕಾರ ನಿಗದಿತ ವಿಮಾನ ಸೇವೆಗಳನ್ನು ಕೈಬಿಟ್ಟು ನಿಗದಿತವಲ್ಲದ ವಿಮಾನ ಸೇವೆಗಳಿಗೆ ಬಳಸುವಂತಿಲ್ಲ ಎಂದು ಹೇಳಿತ್ತು.
ಏರ್ ಇಂಡಿಯಾ ಒದಗಿಸಿದ್ದ ಎಐಸಿ24ಡಬ್ಲ್ಯುಸಿ (ಏರ್ ಇಂಡಿಯಾ ಚಾಂಪಿಯನ್ಸ್ 24 ವರ್ಲ್ಡ್ ಕಪ್) ವಿಮಾನ ಬಾರ್ಬಡೋಸ್‌ನಿಂದ ಸ್ಥಳೀಯ ಸಮಯ 4.50 ಗೆ ನಿರ್ಗಮಿಸಿ ಗುರುವಾರ ಮುಂಜಾನೆ 7 ಗಂಟೆಗೆ ದಿಲ್ಲಿ ತಲುಪಿತ್ತು.
ಏರ್ ಇಂಡಿಯಾ ಅಧಿಕಾರಿಗಳ ಪ್ರಕಾರ ವಿಮಾನ ರದ್ದುಗೊಂಡ ಕುರಿತು ಪ್ರಯಾಣಿಕರಿಗೆ ಮುಂಚಿತವಾಗಿ ತಿಳಿಸಲಾಗಿತ್ತು. ಅವರಿಗೆ ನ್ಯೂಯಾರ್ಕ್ ತನಕ ರಸ್ತೆ ಮೂಲಕ ಸಾಗಲು ಅಥವಾ ವಿಮಾನದಲ್ಲಿ ಸಾಗಲು ಅವಕಾಶ ಕಲ್ಪಿಸಲಾಗಿತ್ತು ನಂತರ ನ್ಯೂಯಾರ್ಕ್‌ನಿಂದ ದಿಲ್ಲಿಗೆ ತೆರಳಲು ಬೇರೆ ವಿಮಾನ ಸೇವೆ ಒದಗಿಸಲಾಗಿತ್ತು ಎಂದು ಏರ್ ಇಂಡಿಯಾ ಹೇಳಿದೆ.
ಚಂಡಮಾರುತ ಬೆರಿಲ್ ಕಾರಣ ಟೀಂ ಇಂಡಿಯಾ ಬಾರ್ಬಡೋಸ್‌ನಿಂದ ತೆರಳುವುದು ವಿಳಂಬವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಪರ್ಯಾಯ ವ್ಯವಸ್ಥೆ ಕಲ್ಪಿಸಿತ್ತು.