ಧಮೇಂದ್ರ ಪ್ರಧಾನ್ ಹೇಳಿಕೆ ವಿರೋಧಿಸಿ ಡಿಎಂಕೆ ಸದಸ್ಯರ ಪ್ರತಿಭಟನೆ: ಲೋಕಸಭಾ ಕಲಾಪಕ್ಕೆ ವ್ಯತ್ಯಯ

Update: 2025-03-10 17:21 IST
Lok sabha

PC : PTI 

  • whatsapp icon

ಹೊಸದಿಲ್ಲಿ: ಪಿಎಂ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ(PM SHRI) ಯೋಜನೆಯ ಅನುಷ್ಠಾನದ ವಿಷಯದಲ್ಲಿ ಸಂಪೂರ್ಣ ‘ಯು-ಟರ್ನ್’ ತೆಗೆದುಕೊಳ್ಳುವ ಮೂಲಕ ತಮಿಳುನಾಡು ಸರಕಾರವು ‘ಅಪ್ರಾಮಾಣಿಕ’ವಾಗಿದೆ ಮತ್ತು ರಾಜ್ಯದ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂಬ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೇಳಿಕೆಯನ್ನು ವಿರೋಧಿಸಿ ಡಿಎಂಕೆ ಸದಸ್ಯರು ಪ್ರತಿಭಟನೆ ನಡೆಸಿದ ಬಳಿಕ ಸೋಮವಾರ ಲೋಕಸಭಾ ಕಲಾಪಗಳನ್ನು ಸುಮಾರು 30 ನಿಮಿಷಗಳ ಕಾಲ ಮುಂದೂಡಲಾಯಿತು.

ಇದಕ್ಕೂ ಮುನ್ನ PM SHRI ಯೋಜನೆ ಕುರಿತು ಪ್ರಶ್ನೆಗೆ ಉತ್ತರಿಸಿದ ಪ್ರಧಾನ್,ಡಿಎಂಕೆ ನೇತೃತ್ವದ ತಮಿಳುನಾಡು ಸರಕಾರವು ಕೇಂದ್ರ,ರಾಜ್ಯ ಅಥವಾ ಸ್ಥಳೀಯ ಸಂಸ್ಥೆಗಳು ನಿರ್ವಹಿಸುವ ಶಾಲೆಗಳನ್ನು ಬಲಗೊಳಿಸುವ ಉದ್ದೇಶದ ಕೇಂದ್ರ ಪ್ರಾಯೋಜಿತ ಯೋಜನೆಯ ಅನುಷ್ಠಾನ ಕುರಿತು ತನ್ನ ನಿಲುವನ್ನು ಬದಲಿಸಿದೆ ಎಂದು ಹೇಳಿದರು.

ಯೋಜನೆಯಡಿ ಸಂಬಂಧಿಸಿದ ರಾಜ್ಯವು ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) 2020ನ್ನು ತಾನು ಜಾರಿಗೊಳಿಸುವುದಾಗಿ ಕೇಂದ್ರ ಸರಕಾರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ ಮತ್ತು ಇದಕ್ಕೆ ಪ್ರತಿಯಾಗಿ ಕೇಂದ್ರ ಸರಕಾರವು ಹಣಕಾಸನ್ನು ಒದಗಿಸುತ್ತದೆ.

ತಮಿಳುನಾಡು ಸರಕಾರವು ಒಪ್ಪಂದಕ್ಕೆ ಸಹಿ ಹಾಕಲು ಆರಂಭದಲ್ಲಿ ಒಪ್ಪಿಕೊಂಡಿತ್ತು. ಆದರೆ ಅದು ಈಗ ತನ್ನ ನಿಲುವನ್ನು ಬದಲಿಸಿದೆ. ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ಸೇರಿದಂತೆ ಹಲವಾರು ಬಿಜೆಪಿಯೇತರ ಆಡಳಿತದ ರಾಜ್ಯಗಳು ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಹೇಳಿದ ಪ್ರಧಾನಿ.ತ.ನಾಡು ಸರಕಾರವು ಅಪ್ರಾಮಾಣಿಕವಾಗಿದೆ ಮತ್ತು ಅದು ರಾಜ್ಯದ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡುತ್ತಿದೆ. ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಒಂದು ಹಂತದಲ್ಲಿ ತಮಿಳುನಾಡು ಸರಕಾರವು PM SHRI ಯೋಜನೆಗೆ ಒಪ್ಪಿಗೆ ನೀಡಿತ್ತು ಮತ್ತು ತನ್ನನ್ನು ಭೇಟಿಯಾಗಲು ಬಂದಿದ್ದ ಹಲವಾರು ಡಿಎಂಕೆ ಸದಸ್ಯರು ತನಗೆ ಈ ವಿಷಯವನ್ನು ತಿಳಿಸಿದ್ದರು. ಆದರೆ ಅವರು ಮರಳಿದಾಗ ಯೂ-ಟರ್ನ್ ಮಾಡಿದ್ದಾರೆ. ಅವರು ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಅವರು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಮತ್ತು ತಮಿಳುನಾಡಿನ ವಿದ್ಯಾರ್ಥಿಗಳಿಗೆ ಅನ್ಯಾಯವೆಸಗುತ್ತಿದ್ದಾರೆ. ಅವರು ಪ್ರಜಾಪ್ರಭುತ್ವ ವಿರೋಧಿಗಳು,ಅನಾಗರಿಕರು ಎಂದು ಪ್ರಧಾನ ಆರೋಪಿಸಿದರು.

ಸಚಿವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಡಿಎಂಕೆ ಸದಸ್ಯರು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಭಾರೀ ಪ್ರತಿಭಟನೆಯನ್ನು ನಡೆಸಿದರು.

ತಮ್ಮ ಆಸನಗಳಿಗೆ ಮರಳುವಂತೆ ಮತ್ತು ಸದನದ ಸುಗಮ ಕಾರ್ಯನಿರ್ವಹಣೆಗೆ ಅವಕಾಶ ನೀಡುವಂತೆ ಸ್ಪೀಕರ್ ಓಂ ಬಿರ್ಲಾ ಅವರು ಮನವಿ ಮಾಡಿಕೊಂಡರಾದರೂ ಅದನ್ನು ಕಡೆಗಣಿಸಿ ಡಿಎಂಕೆ ಸದಸ್ಯರು ಪ್ರತಿಭಟನೆ ಮುಂದುವರಿಸಿದಾಗ ಸ್ಪೀಕರ್ ಮಧ್ಯಾಹ್ನ 12 ಗಂಟೆಯವರೆಗೆ ಸದನವನ್ನು ಮುಂದೂಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News