ಬಿಜೆಪಿಯು ರಾಮ ಮಂದಿರ ಪ್ರತಿಷ್ಠಾಪನೆಯನ್ನು ರಾಜಕೀಯ ಕಾರ್ಯಕ್ರಮವನ್ನಾಗಿಸಿರುವುದರಿಂದ ಭಾಗವಹಿಸುವುದು ಕಷ್ಟ: ರಾಹುಲ್ ಗಾಂಧಿ
ಹೊಸದಿಲ್ಲಿ: ಬಿಜೆಪಿ ಹಾಗೂ ಆರೆಸ್ಸೆಸ್ ಜನವರಿ 22ರಂದು ನಡೆಯಲಿರುವ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಕೇಂದ್ರಿತ ʼರಾಜಕೀಯ ಕಾರ್ಯಕ್ರಮʼ ಆಗಿಸಿರುವುದರಿಂದ ತಮ್ಮ ಪಕ್ಷ ನಾಯಕರಿಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಷ್ಟವಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನಾಗಾಲ್ಯಾಂಡ್‌ನಲ್ಲಿ ಅವರ ಭಾರತ್ ಜೋಡೋ ಯಾತ್ರೆ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಮಾತನಾಡುತ್ತಿದ್ದರು.
“ರಾಮ ಮಂದಿರ ಕಾರ್ಯಕ್ರಮಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್ ಚುನಾವಣಾ ಲೇಪನ ನೀಡುತ್ತಿವೆ. ಆ ಕಾರಣ ಅದರಲ್ಲಿ ಭಾಗವಹಿಸಲು ಕಷ್ಟವಾಗುತ್ತಿದೆ. ನಮ್ಮ ಮುಖ್ಯ ಎದುರಾಳಿಗಳಾದ ಬಿಜೆಪಿ ಮತ್ತು ಆರೆಸ್ಸೆಸ್ ಈ ಕಾರ್ಯಕ್ರಮವನ್ನು ತಮ್ಮದಾಗಿಸಿದ್ದಾರೆ,” ಎಂದು ರಾಹುಲ್ ಹೇಳಿದರು.
ವಿಪಕ್ಷ ಇಂಡಿಯಾ ಮೈತ್ರಿಕೂಟವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲಿದೆ, ಸೀಟು ಹಂಚಿಕೆ ಚರ್ಚೆಗಳು ಸೌಹಾರ್ದಯುತವಾಗಿ ನಡೆಯುತ್ತಿವೆ. ಇಂಡಿಯಾ ಮೈತ್ರಿಕೂಟದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಯುತ್ತವೆ ಹಾಗೂ ನಾವು ಒಟ್ಟಾಗಿ ಬಿಜೆಪಿಯನ್ನು ಸೋಲಿಸುತ್ತೇವೆ ಎಂಬ ಆತ್ಮವಿಶ್ವಾಸವಿದೆ, ಸೀಟು ಹಂಚಿಕೆ ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ,” ಎಂದು ಅವರು ಹೇಳಿದರು.