ʼದಿಲ್ಲಿ ಚಲೊʼ ಪ್ರತಿಭಟನೆ: ಮತ್ತೊಬ್ಬ ರೈತ ಮೃತ್ಯು; 15 ದಿನಗಳಲ್ಲಿ ಆರನೇ ಸಾವು
ಪಾಟಿಯಾಲ: ಮಂಗಳವಾರ ರಾಜಿಂದರ್ ಸರಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತಕ್ಕೀಡಾಗಿರುವ ಖನೌರಿ ಗಡಿ ಬಳಿ ಪ್ರತಿಭಟನೆ ನಡೆಸುತ್ತಿದ್ದ ಮತ್ತೊಬ್ಬ ಪಂಜಾಬ್ ರೈತ ಮೃತಪಟ್ಟಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಪ್ರತಿನಿಧಿಗಳ ಪ್ರಕಾರ, ಮೃತ ರೈತನನ್ನು ಕರ್ನೈಲ್ ಸಿಂಗ್ (62) ಎಂದು ಗುರುತಿಸಲಾಗಿದೆ. ಅವರು ಪತ್ರಾಣ್ ಬಳಿಯ ಅರ್ನೊ ಖುರ್ದ್ ಗ್ರಾಮದ ನಿವಾಸಿಯಾಗಿದ್ದಾರೆ.
ಕರ್ನೈಲ್ ಸಿಂಗ್ ಸಾವಿನೊಂದಿಗೆ ಇಲ್ಲಿವರೆಗಿನ ದಿಲ್ಲಿ ಚಲೊ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಒಟ್ಟು ಆರು ಮಂದಿ ರೈತರು ಕಳೆದ ಹದಿನೈದು ದಿನಗಳಲ್ಲಿ ಮೃತಪಟ್ಟಂತಾಗಿದೆ. ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಸಂಘಟನೆಯ ಅಧ್ಯಕ್ಷ ಸುರ್ಜೀತ್ ಸಿಂಗ್ ಫೂಲ್ ಪ್ರಕಾರ, ಫೆಬ್ರವರಿ 21ರಂದು ಖನೌರಿ ಗಡಿಯ ಬಳಿ ಪೊಲೀಸರು ಅಶ್ರುವಾಯು ಶೆಲ್ ದಾಳಿ ನಡೆಸಿದ್ದರಿಂದ, ಅಶ್ರುವಾಯು ಶೆಲ್ ಹೊಮ್ಮಿಸಿದ ಹೊಗೆಯನ್ನು ಸೇವಿಸಿ ಕರ್ನೈಲ್ ಸಿಂಗ್ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದರು ಎಂದು ಹೇಳಲಾಗಿದೆ.
ಕರ್ನೈಲ್ ಸಿಂಗ್ ತಮ್ಮ ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಕರ್ನೈಲ್ ಸಿಂಗ್ ಒಂದೂವರೆ ಎಕರೆ ಭೂಮಿ ಹೊಂದಿದ್ದು, ಎಂಟು ಲಕ್ಷ ರೂಪಾಯಿ ಸಾಲಗಾರರಾಗಿದ್ದರು ಎಂದು ಬಿಕೆಯು (ಕ್ರಾಂತಿಕಾರಿ) ಪ್ರತಿನಿಧಿಗಳು ತಿಳಿಸಿದ್ದಾರೆ.