ಕನ್ವರ್ ಯಾತ್ರೆ ಮಾರ್ಗದಲ್ಲಿ ಅಂಗಡಿ ಮಾಲಿಕರ ಹೆಸರು ಪ್ರದರ್ಶನ ಕಡ್ಡಾಯವಲ್ಲ : ಮಧ್ಯಪ್ರದೇಶ ಸರಕಾರದ ಸ್ಪಷ್ಟನೆ

Update: 2024-07-22 15:08 GMT

PC : NDTV

ಭೋಪಾಲ : ರಾಜ್ಯದಲ್ಲಿ ಕನ್ವರ್ ಯಾತ್ರೆ ಮಾರ್ಗದಲ್ಲಿಯ ಅಂಗಡಿಗಳ ಮಾಲಿಕರು ತಮ್ಮ ಹೆಸರುಗಳನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಯಾವುದೇ ಸೂಚನೆಗಳನ್ನು ತಾನು ಹೊರಡಿಸಿಲ್ಲ ಎಂದು ಮಧ್ಯಪ್ರದೇಶದ ಬಿಜೆಪಿ ಸರಕಾರವು ಸ್ಪಷ್ಟಪಡಿಸಿದೆ.

ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್ಗಳ ಮಾಲಿಕರು ತಮ್ಮ ಹೆಸರುಗಳನ್ನು ಎದ್ದು ಕಾಣುವಂತೆ ಪ್ರದರ್ಶಿಸಬೇಕು ಎಂಬ ಆದೇಶ ಕುರಿತು ಉತ್ತರ ಪ್ರದೇಶದಲ್ಲಿ ಸೃಷ್ಟಿಯಾಗಿರುವ ವಿವಾದದ ನಡುವೆ ಮಧ್ಯಪ್ರದೇಶ ಸರಕಾರವು ಯಾವುದೇ ಗೊಂದಲಗಳನ್ನು ಹರಡದಂತೆ ನಗರ ಸಂಸ್ಥೆಗಳಿಗೆ ಸೂಚಿಸಿದೆ.

ಉಜ್ಜಯಿನಿ ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಗಡಿಗಳ ಮಾಲಿಕರು ನಾಮಫಲಕಗಳಲ್ಲಿ ತಮ್ಮ ಹೆಸರುಗಳು ಮತ್ತು ದೂರವಾಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕು ಎಂಬ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಮೇಯರ್ ಮಹೇಶ ತತ್ವಾಲ್ ಅವರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ(ಯುಡಿಎಚ್ಡಿ)ಯು,ರಾಜ್ಯ ಸರಕಾರದ ಮಟ್ಟದಲ್ಲಿ ಇಂತಹ ಯಾವುದೇ ಸೂಚನೆಗಳನ್ನು ಹೊರಡಿಸಲಾಗಿಲ್ಲ ಎಂದು ರವಿವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ.

ಮಧ್ಯಪ್ರದೇಶ ಹೊರಾಂಗಣ ಜಾಹೀರಾತು ಮಾಧ್ಯಮ ನಿಯಮಗಳು,2017ರಡಿ ಅಂಗಡಿಗಳ ಮೇಲೆ ನಾಮಫಲಕಗಳನ್ನು ಹಾಕಬಹುದು. ಈ ನಾಮಫಲಕಗಳ ಮೇಲೆ ಅಂಗಡಿ ಮಾಲಿಕರ ಹೆಸರನ್ನು ಪ್ರದರ್ಶಿಸುವುದು ಕಡ್ಡಾಯವಲ್ಲ ಎಂದು ಯುಡಿಎಚ್ಡಿ ತಿಳಿಸಿದೆ.

ಮೇಯರ್ ಹೇಳಿಕೆಯ ಬಳಿಕ ಉಜ್ಜಯಿನಿ ಮಹಾನಗರ ಪಾಲಿಕೆಯು ಸಹ ನಗರದಲ್ಲಿಯ ಅಂಗಡಿಗಳ ನಾಮಫಲಕಗಳಲ್ಲಿ ಮಾಲಿಕರ ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವವಿಲ್ಲ ಎಂದು ದೃಢಪಡಿಸಿದೆ.

ಈ ನಡುವೆ ಉತ್ತರ ಪ್ರದೇಶದ ಬಿಜೆಪಿ ಸರಕಾರವು ಕನ್ವರ್ ಯಾತ್ರೆ ಮಾರ್ಗದಲ್ಲಿರುವ ಹೋಟೆಲ್ಗಳ ನಾಮಫಲಕಗಳಲ್ಲಿ ಮಾಲಿಕರ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಪ್ರದರ್ಶಿಸಬೇಕು ಎಂಬ ತನ್ನ ಆದೇಶವನ್ನು ಶುಕ್ರವಾರ ರಾಜ್ಯಾದ್ಯಂತ ವಿಸ್ತರಿಸಿದೆ.

ತನ್ನ ರಾಜ್ಯದಲ್ಲಿ ಇಂತಹ ಸೂಚನೆಗಳು ಈಗಾಗಲೇ ಜಾರಿಯಲ್ಲಿವೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News