ಕುದುರೆ ವ್ಯಾಪಾರವನ್ನು ತಪ್ಪಿಸಲು ಅಲ್ಪಮತದ ಹರ್ಯಾಣ ಬಿಜೆಪಿ ಸರಕಾರವನ್ನು ವಿಸರ್ಜಿಸಿ: ರಾಜ್ಯಪಾಲರನ್ನು ಆಗ್ರಹಿಸಿದ ಕಾಂಗ್ರೆಸ್

Update: 2024-06-21 11:26 GMT

Photo: X/@BhupinderShooda

ಚಂಡೀಗಢ: ಹರ್ಯಾಣ ವಿಧಾನಸಭೆಯಲ್ಲಿ ಬಿಜೆಪಿ ಸರಕಾರವು ಅಲ್ಪಮತ ಹೊಂದಿರುವುದರಿಂದ, ಆಡಳಿತಾರೂಢ ಬಿಜೆಪಿಯಿಂದ ಕುದುರೆ ವ್ಯಾಪಾರವನ್ನು ತಪ್ಪಿಸಲು ಕೂಡಲೇ ವಿಧಾನಸಭೆಯನ್ನು ವಿಸರ್ಜಿಸಬೇಕು ಎಂದು ರಾಜ್ಯ ಕಾಂಗ್ರೆಸ್ ನಾಯಕರು ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರನ್ನು ಆಗ್ರಹಿಸಿದ್ದಾರೆ.

90 ಸದಸ್ಯ ಬಲದ ಹರ್ಯಾಣ ವಿಧಾನಸಭೆಯಲ್ಲಿ 41 ಶಾಸಕರನ್ನು ಹೊಂದಿರುವ ಬಿಜೆಪಿಯು, ಓರ್ವ ಪಕ್ಷೇತರ ಅಭ್ಯರ್ಥಿ ಹಾಗೂ ಹರ್ಯಾಣ ಲೋಕ ಹಿತ ಪಕ್ಷದ ಏಕೈಕ ಶಾಸಕನ ಬೆಂಬಲ ಮಾತ್ರ ಹೊಂದಿದೆ. ಯಾವುದೇ ಪಕ್ಷ ಅಧಿಕಾರದಲ್ಲಿ ಉಳಿಯಬೇಕಾದರೆ, 46 ಶಾಸಕರ ಬೆಂಬಲ ಹೊಂದಿರುವುದು ಅಗತ್ಯವಾಗಿದೆ. ಆದರೀಗ, ಹರ್ಯಾಣ ವಿಧಾನಸಭೆಯು 88 ಶಾಸಕರನ್ನು ಮಾತ್ರ ಹೊಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಹರ್ಯಾಣ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಭೂಪಿಂದರ್ ಹೂಡಾ, “ಈ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕ ಹಕ್ಕಿಲ್ಲ. ನಾವು ವಿಧಾನಸಭೆಯನ್ನು ವಿಸರ್ಜಿಸಿ, ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದೇವೆ” ಎಂದು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಬಿಜೆಪಿಯು ವಿಧಾನಸಭೆಯಲ್ಲಿ ಬಹುಮತದ ಕೊರತೆ ಎದುರಿಸುತ್ತಿದ್ದರೂ, ಕುದುರೆ ವ್ಯಾಪಾರ ಅಥವಾ ಇನ್ನಿತರ ಅಸಾಂವಿಧಾನಿಕ ಮಾರ್ಗಗಳ ಮೂಲಕ ಅಧಿಕಾರ ಉಳಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷವಾದ ಕಾಂಗ್ರೆಸ್ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News