ಈ ಬಾರಿಯ ದೀಪಾವಳಿಯಲ್ಲಿ 3.75 ಲಕ್ಷ ಕೋಟಿ ರೂ. ವ್ಯಾಪಾರ ದಾಖಲು: ಸಿಎಐಟಿ
ಹೊಸದಿಲ್ಲಿ: ಈ ಬಾರಿಯ ದೀಪಾವಳಿಯ ಸಂದರ್ಭ ಚಿಲ್ಲರೆ ಮಾರುಕಟ್ಟೆಯಲ್ಲಿ ಇದುವರೆಗೆ 3.75 ಲಕ್ಷ ಕೋಟಿ ರೂ. ವ್ಯಾಪಾರ ದಾಖಲಾಗಿದೆ ಎಂದು ವ್ಯಾಪಾರಿಗಳ ಸಂಘಟನೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಸೋಮವಾರ ತಿಳಿಸಿದೆ.
ಗೋವರ್ಧನ ಪೂಜೆ, ಭೈಯಾ ದೂಜ್, ಚಾತ್ ಪೂಜೆ ಹಾಗೂ ತುಳಸಿ ವಿವಾಹದಂತಹ ಹಬ್ಬಗಳು ಇನ್ನಷ್ಟೇ ನಡೆಯಬೇಕಿದೆ. ಈ ಹಬ್ಬಗಳಲ್ಲಿ 50,000 ಕೋಟಿ ರೂ. ಹೆಚ್ಚುವರಿ ವ್ಯಾಪಾರವಾಗಲಿದೆ ಎಂದು ಸಿಎಐಟಿ ತಿಳಿಸಿದೆ.
ಈ ಭಾರಿಯ ದೀಪಾವಳಿ ಸಂದರ್ಭ ಹೆಚ್ಚಾಗಿ ಭಾರತೀಯ ಉತ್ಪನ್ನಗಳು ಮಾತ್ರವೇ ಮಾರಾಟವಾಗಿವೆ ಹಾಗೂ ಖರೀದಿಸಲಾಗಿವೆ. ಇದು ಗಮನಾರ್ಹ ಎಂದು ಅದು ಹೇಳಿದೆ.
ಈ ದೀಪಾವಳಿಯ ಸಂದರ್ಭ ಚೀನಾ ಉತ್ಪನ್ನಗಳು 1 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಮೌಲ್ಯದ ವ್ಯಾಪಾರವನ್ನು ಕಳೆದುಕೊಂಡಿವೆ ಎಂದು ಸಿಎಐಟಿಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಅವರು ಹೇಳಿದ್ದಾರೆ.
‘‘ಹಿಂದಿನ ವರ್ಷ ದೀಪಾವಳಿ ಸಂದರ್ಭ ಚೀನಾ ಉತ್ಪನ್ನಗಳು ಸುಮಾರು ಶೇ. 70 ಮಾರುಕಟ್ಟೆಯನ್ನು ಆಕ್ರಮಿಸಿಕೊಂಡಿತ್ತು’’ ಎಂದು ಅವರು ತಿಳಿಸಿದ್ದಾರೆ.