ದತ್ತು ಪಡೆದ ಬಳಿಕ ಅತ್ಯಾಚಾರ ಸಂತ್ರಸ್ತೆಯ ಮಗುವಿನ ಡಿಎನ್ಎ ಪರೀಕ್ಷೆ ಸರಿಯಲ್ಲ : ಬಾಂಬೆ ಹೈಕೋರ್ಟ್
ಮುಂಬೈ: ಅತ್ಯಾಚಾರ ಸಂತ್ರಸ್ತೆಯ ಮಗುವಿನ ದತ್ತು ಸ್ವೀಕಾರದ ಬಳಿಕ ಅದರ ಡಿಎನ್ ಪರೀಕ್ಷೆಯನ್ನು ನಡೆಸುವುದು ಮಗುವಿನ ಹಿತದೃಷ್ಟಿಯಿಂದ ಸರಿಯಲ್ಲ ಎಂದು ಬಾಂಬೆ ಉಚ್ಚ ನ್ಯಾಯಾಲಯವು ಹೇಳಿದೆ.
17ರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ,ಆಕೆ ಗರ್ಭ ಧರಿಸಲು ಕಾರಣನಾಗಿದ್ದ ಆರೋಪಿಗೆ ನ.10ರಂದು ಜಾಮೀನು ಮಂಜೂರು ಮಾಡಿದ ಸಂದರ್ಭದಲ್ಲಿ ಏಕ ನ್ಯಾಯಾಧೀಶ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಬಾಲಕಿ ಮಗುವಿಗೆ ಜನ್ಮ ನೀಡಿದ್ದು ಅದು ದತ್ತು ಸ್ವೀಕಾರಗೊಂಡಿದೆ.
ಸಂತ್ರಸ್ತೆಗೆ ಜನಿಸಿರುವ ಮಗುವಿನ ಡಿಎನ್ಎ ಪರೀಕ್ಷೆಯನ್ನು ನಡೆಸಲಾಗಿದೆಯೇ ಎಂದು ನ್ಯಾಯಾಲಯವು ಈ ಹಿಂದೆ ಪೋಲಿಸರನ್ನು ಪ್ರಶ್ನಿಸಿತ್ತು.
ಜನನದ ಬಳಿಕ ಸಂತ್ರಸ್ತೆ ಮಗುವನ್ನು ದತ್ತು ನೀಡಿದ್ದಾಳೆ ಮತ್ತು ಸಂಬಂಧಿತ ದತ್ತು ನೆರವು ಸಂಸ್ಥೆಯು ದತ್ತು ಪೋಷಕರ ಗುರುತನ್ನು ಬಹಿರಂಗಗೊಳಿಸುತ್ತಿಲ್ಲ ಎಂದು ಪೋಲಿಸರು ನ್ಯಾಯಾಲಯಕ್ಕೆ ತಿಳಿಸಿದರು.
ಅದು ಸಮಂಜಸವಾಗಿದೆ ಎಂದು ಹೇಳಿದ ಉಚ್ಚ ನ್ಯಾಯಾಲಯವು, ಮಗುವನ್ನು ದತ್ತು ನೀಡಲಾಗಿರುವುದರಿಂದ ವಾಸ್ತವಿಕ ಪರಿಸ್ಥಿತಿಯಲ್ಲಿ ಮಗುವಿನ ಡಿಎನ್ಎ ಪರೀಕ್ಷೆಯನ್ನು ನಡೆಸುವುದು ಅದರ ಮತ್ತು ಅದರ ಭವಿಷ್ಯದ ಹಿತಕ್ಕೆ ಪೂರಕವಾಗದಿರಬಹುದು ಎಂದು ತಿಳಿಸಿತು.
ಸಂತ್ರಸ್ತೆ 17 ವರ್ಷ ವಯಸ್ಸಿನವಳಾಗಿದ್ದಳೂ ತಮ್ಮ ಸಂಬಂಧವು ಒಮ್ಮತದ್ದಾಗಿತ್ತು. ಆ ಬಗ್ಗೆ ಆಕೆಗೆ ತಿಳುವಳಿಕೆ ಇತ್ತು ಎಂದು ಆರೋಪಿ ತನ್ನ ಜಾಮೀನು ಅರ್ಜಿಯಲ್ಲಿ ಹೇಳಿಕೊಂಡಿದ್ದ. ಆರೋಪಿಯು ಸಂತ್ರಸ್ತೆಯೊಂದಿಗೆ ಬಲವಂತದಿಂದ ದೈಹಿಕ ಸಂಬಂಧವನ್ನು ಬೆಳೆಸಿಕೊಂಡಿದ್ದ ಮತ್ತು ಆಕೆ ಗರ್ಭಿಣಿಯಾಗಲು ಕಾರಣನಾಗಿದ್ದ ಎನ್ನುವುದು ಪೋಲಿಸರ ಆರೋಪವಾಗಿದೆ.
ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಆರೋಪದಲ್ಲಿ ಆರೋಪಿಯನ್ನು 2020ರಲ್ಲಿ ಮುಂಬೈನ ಒಷಿವಾರಾ ಪೋಲಿಸರು ಬಂಧಿಸಿದ್ದರು. ಸಂತ್ರಸ್ತೆಯು ಸಂಬಂಧಕ್ಕೆ ಒಪ್ಪಿಕೊಂಡಿದ್ದಳು ಎಂಬ ಆರೋಪಿಯ ವಾದವನ್ನು ಈ ಹಂತದಲ್ಲಿ ತಾನು ಒಪ್ಪುವುದಿಲ್ಲ. ಆದರೆ 2020ರಲ್ಲಿ ಬಂಧನವಾದಾಗಿನಿಂದ ಆತ ಜೈಲಿನಲ್ಲಿ ಕೊಳೆಯುತ್ತಿರುವುದರಿಂದ ಆತನಿಗೆ ಜಾಮೀನು ಮಂಜೂರು ಮಾಡಬೇಕಾಗುತ್ತದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದ್ದರೂ ವಿಶೇಷ ನ್ಯಾಯಾಲಯವು ಇನ್ನಷ್ಟೇ ಆರೋಪಗಳನ್ನು ರೂಪಿಸಬೇಕಿದೆ ಎನ್ನುವುದನ್ನು ಗಮನಿಸಿದ ಉಚ್ಚ ನ್ಯಾಯಾಲಯವು,‘ವಿಚಾರಣೆ ಪೂರ್ಣಗೊಳ್ಳುವ ಸಾಧ್ಯತೆಯು ಕಂಡು ಬರುತ್ತಿಲ್ಲ. ಆರೋಪಿಯು ಎರಡು ವರ್ಷ ಹತ್ತು ತಿಂಗಳುಗಳಿಂದಲೂ ಜೈಲಿನಲ್ಲಿದ್ದಾನೆ. ಹೀಗಾಗಿ ನಮ್ಮ ಅಭಿಪ್ರಾಯದಲ್ಲಿ ಆತನನ್ನು ಇನ್ನಷ್ಟು ಕಾಲ ಬಂಧನದಲ್ಲಿರಿಸುವ ಅಗತ್ಯವಿಲ್ಲ ’ ಎಂದು ಹೇಳಿತು.