ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ: ಕೊಲ್ಕತ್ತಾ ಆಸ್ಪತ್ರೆ ವಿರುದ್ಧ ಟೀಕೆ ಮಾಡಿದ ಟಿಎಂಸಿ ವಕ್ತಾರ ವಜಾ
ಕೊಲ್ಕತ್ತಾ: ನಗರದ ಆರ್.ಜಿ.ಕಾರ್ ವೈದ್ಯಕೀಯ ಕಾಲೇಜು ಮತ್ತು ರಾಜ್ಯ ಆರೋಗ್ಯ ಇಲಾಖೆ ಆಗುಹೋಗುಗಳ ವಿರುದ್ಧ ಮಾತನಾಡಿದ್ದ ಟಿಎಂಸಿ ನಾಯಕ ಶಂತನು ಸೇನ್ ಅವರನ್ನು ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಲಾಗಿದೆ.
ತರಬೇತಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಸಂತ್ರಸ್ತೆಯ ಹತ್ಯೆ ಪ್ರಕರಣದ ಬಗ್ಗೆ ರಾಷ್ಟ್ರಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಶಂತನು ಈ ಹೇಳಿಕೆ ನೀಡಿದ್ದರು. ತರಬೇತಿ ವೈದ್ಯೆಯ ಮೇಲೆ ದೌರ್ಜನ್ಯ ಎಸಗಿದ ಆರೋಪಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪುನರುಚ್ಚರಿಸಿದ ಅವರು, ಆಸ್ಪತ್ರೆ ಮೇಲೆ ನಡೆದ ದಾಳಿಯನ್ನು ಕೂಡಾ ಖಂಡಿಸಿದರು.
ಮಾಜಿ ಸಂಸದರು ಮತ್ತು ವೃತ್ತಿಯಲ್ಲಿ ವೈದ್ಯರೂ ಆಗಿರುವ ಶಂತನು, ಆರ್.ಜಿ.ಕರ್ ಆಸ್ಪತ್ರೆಯ ಪ್ರಾಚಾರ್ಯರ ವಿರುದ್ಧ ಕಳೆದ ಮೂರು ವರ್ಷಗಳಿಂದ ದೂರುಗಳು ಬರುತ್ತಿವೆ. ಆರೋಗ್ಯ ಇಲಾಖೆಯಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಮುಖ್ಯಮಂತ್ರಿಗಳಿಗೆ ಸ್ಪಷ್ಟಚಿತ್ರಣ ನೀಡುತ್ತಿಲ್ಲ ಎಂದು ಅವರು ಆಪಾದಿಸಿದರು.
ಶುಕ್ರವಾರ ಕಳುಹಿಸಿದ ವಿಡಿಯೊ ಸಂದೇಶದಲ್ಲಿ ತಮ್ಮನ್ನು ಟಿಎಂಸಿ ವಕ್ತಾರ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಹೇಳಿದ್ದಾರೆ.