ಅವಳಿ ದಾಖಲೆ: ಸರ್ವಕಾಲಿಕ ಮಟ್ಟಕ್ಕೆ ಸೆನ್ಸೆಕ್ಸ್, ಹೂಡಿಕೆದಾರರ ಸಂಪತ್ತು
ಮುಂಬೈ: ವಿದೇಶಿ ನಿಧಿಗಳ ಖರೀದಿ ಭರಾಟೆಯಿಂದ ಷೇರುಪೇಟೆಯ ನಾಗಾಲೋಟ ಸೋಮವಾರ ಮುಂದುವರಿದಿದ್ದು, ಸೆನ್ಸೆಕ್ಸ್ ಹಾಗೂ ಹೂಡಿಕೆದಾರರ ಸಂಪತ್ತು ದಾಖಲೆ ಮಟ್ಟ ತಲುಪಿದೆ. ಇದೇ ಮೊದಲ ಬಾರಿಗೆ ಸೂಚ್ಯಂಕ 65 ಸಾವಿರದ ಗಡಿ ತಲುಪಿದೆ. ಒಂದು ಸೆಷನ್ ನಲ್ಲಿ 64 ಸಾವಿರದ ಆಸು ಪಾಸು ಇದ್ದ ಸೆನ್ಸೆಕ್ಸ್ ಡಿಢೀರನೇ ಜಿಗಿತ ಕಂಢಿದೆ. ಅಂತೆಯೇ ಬಿಎಸ್ಇಯಲ್ಲಿ ಭಾರತೀಯ ಷೇರುಗಳ ಮೌಲ್ಯ 300 ಲಕ್ಷ ಕೋಟಿಗೆ ತಲುಪಿದೆ. ಎರಡು ವರ್ಷಗಳ ಹಿಂದೆ 200 ಲಕ್ಷ ಕೋಟಿ ರೂಪಾಯಿಯ ಮೈಲುಗಲ್ಲು ತಲುಪಿತ್ತು.
ವಹಿವಾಟಿನ ಮೂರನೇ ಅವಧಿಯಲ್ಲಿ ಸೆನ್ಸೆಕ್ಸ್ ಶೇಕಡ 1ರಷ್ಟು ಅಥವಾ 486 ಅಂಕಗಳಷ್ಟು ಜಿಗಿದಿದ್ದು, 65205ರಲ್ಲಿ ವಹಿವಾಟು ಅಂತ್ಯಗೊಂಡಿತು. ರಿಲಯನ್ಸ್, ಐಟಿಸಿ ಮತ್ತು HDFC ಷೇರುಗಳು ಭಾರಿ ಲಾಭ ಗಳಿಸಿದವು. ಇದಕ್ಕೂ ಮುನ್ನ ಅಮೆರಿಕ ಮಾರುಕಟ್ಟೆಯ ಧನಾತ್ಮಕ ಅಂಶಗಳ ಹಿನ್ನೆಲೆಯಲ್ಲಿ ಸೆನ್ಸೆಕ್ಸ್ 65 ಸಾವಿರದ ಗಡಿ ದಾಟಿತ್ತು.
ವಿದೇಶಿ ಹೂಡಿಕೆದಾರರ ಸುಸ್ಥಿರ ಖರೀದಿ, ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ಷೇರುಗಳ ಚೇತರಿಕೆಗೆ ಮುಖ್ಯ ಕಾರಣ ಎಂದು ವಿಶ್ಲೇಷಕರು ಹೇಳುತ್ತಾರೆ. 2023ರ ಮೊದಲ ಆರು ತಿಂಗಳಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟು 88256 ಕೋಟಿ ರೂಪಾಯಿಗಳನ್ನು ಷೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ. 2022ರಲ್ಲಿ ಈ ಹೂಡಿಕೆದಾರರು 1.2 ಲಕ್ಷ ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.
ಈ ವರ್ಷದ ಮಾರ್ಚ್ 24ರಂದು 57527 ಅಂಕಗಳೊಂದಿಗೆ ಅತ್ಯಂತ ಕನಿಷ್ಠ ಮಟ್ಟ ತಲುಪಿದ್ದ ಸೆನ್ಸೆಕ್ಸ್ ಆ ಬಳಿಕ ಶೇಕಡ 13ರಷ್ಟು ಪ್ರಗತಿ ಕಂಡಿದೆ. ಸೆನ್ಸೆಕ್ಸ್ ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಶೇಕಡ 7ರಷ್ಟು ಹೆಚ್ಚಳ ದಾಖಲಿಸಿದೆ. ಈ ಅವಧಿಯಲ್ಲಿ ಶೇಕಡ 16ರಷ್ಟು ಪ್ರಗತಿಯನ್ನು ಎಸ್ & ಎಸ್ ಅಂದಾಜಿಸಿದ್ದರೆ, ಡೋವ್ ಶೇಕಡ 4ರ ಹೆಚ್ಚಳ ನಿರೀಕ್ಷಿಸಿತ್ತು.