ಪ್ರಧಾನಿ ಮೋದಿ ನಿವಾಸದ ಮೇಲೆ ಡ್ರೋನ್ ಹಾರಾಟ ಪತ್ತೆ; ತನಿಖೆ ಆರಂಭ
Update: 2023-07-03 05:14 GMT
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ದಿಲ್ಲಿ ನಿವಾಸದ ಮೇಲೆ ಆಗಸದಲ್ಲಿ ಇಂದು ಬೆಳಗ್ಗೆ ಡ್ರೋನ್ ಒಂದು ಹಾರಾಡುವುದು ಗಮನಕ್ಕೆ ಬಂದಿದ್ದು ಈ ಕುರಿತು ತನಿಖೆ ಆರಂಭಿಸಲಾಗಿದೆ.
ಪ್ರಧಾನಿಯ ಅಧಿಕೃತ ನಿವಾಸ ನೋ-ಫ್ಲೈ ಝೋನ್ ಅಥವಾ ಹಾರಾಟ ನಿಷಿದ್ಧ ವಲಯದಲ್ಲಿ ಬರುತ್ತದೆ.
ಮುಂಜಾನೆ ಸುಮಾರು 5 ಗಂಟೆಗೆ ಈ ಡ್ರೋನ್ ಹಾರಾಡುತ್ತಿರುವುದು ಗಮನಕ್ಕೆ ಬಂತು. ಈ ಕುರಿತು ದಿಲ್ಲಿ ಪೊಲೀಸರ ಗಮನ ಸೆಳೆದ ಬೆನ್ನಲ್ಲೇ ಅದನ್ನು ಪತ್ತೆಹಚ್ಚಲು ಕ್ರಮಕೈಗೊಳ್ಳಲಾಗಿದೆ.
ಇಲ್ಲಿಯ ತನಕ ಪೊಲೀಸರು ಅಥವಾ ಭದ್ರತಾ ಏಜನ್ಸಿಗಳಿಗೆ ಶಂಕಾಸ್ಪದ ಅಂಶ ಯಾವುದೂ ಪತ್ತೆಯಾಗಿಲ್ಲ.
“ಹತ್ತಿರದ ಪ್ರದೇಶಗಳಲ್ಲಿ ಶೋಧ ನಡೆಸಲಾಯಿತಾದರೂ ಯಾವುದೇ ಶಂಕಾಸ್ಪದ ವಸ್ತು ಪತ್ತೆಯಾಗಿಲ್ಲ. ಏರ್ ಟ್ರಾಫಿಕ್ ಕಂಟ್ರೋಲ್ ರೂಮ್ ಅನ್ನೂ ಸಂಪರ್ಕಿಸಲಾಯಿತು, ಅವರು ಕೂಡ ಪ್ರಧಾನಿ ನಿವಾಸದ ಪಕ್ಕ ಯಾವುದೇ ಹಾರುವ ವಸ್ತು ಪತ್ತೆಹಚ್ಚಿಲ್ಲ,” ಎಂದು ದಿಲ್ಲಿ ಪೊಲೀಸರ ಹೇಳಿಕೆ ತಿಳಿಸಿದೆ.