ದಿಲ್ಲಿಯಲ್ಲಿ ಶಾಲೆಗಳಿಗೆ ಅವಧಿಗೆ ಮುಂಚಿತವಾಗಿ ಚಳಿಗಾಲದ ರಜೆ ಘೋಷಣೆ

Update: 2023-11-08 17:06 GMT

Photo- PTI

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ವಾಯು ಗುಣಮಟ್ಟವು ತೀರಾ ಕಳಪೆ ಸ್ಥಿತಿಯಲ್ಲಿ ಮುಂದುವರಿದಿರುವಂತೆಯೇ ದಿಲ್ಲಿ ಸರಕಾರವು ಎಲ್ಲಾ ಶಾಲೆಗಳಿಗೆ ಚಳಿಗಾಲದ ರಜೆಯನ್ನು ನವೆಂಬರ್ 9ರಿಂದ 18ರವರೆಗೆ ನಿಗದಿತ ಅವಧಿಗೆ ಮುಂಚಿತವಾಗಿ ಘೋಷಿಸಿದೆ.

‘‘ದಿಲ್ಲಿಯಲ್ಲಿ ವಾಯುಗುಣಮಟ್ಟವು ಗಂಭೀರವಾಗಿರುವುದರಿಂದ ಜಿಆರ್‌ಎಪಿ( ಶ್ರೇಣೀಕೃತ ಪ್ರತಿಕ್ರಿಯಾ ಕಾರ್ಯ ಯೋಜನೆ)ಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸದ್ಯಕ್ಕೆ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ದಿಲ್ಲಿಗೆ ಬಿಡುಗಡೆಯಿಲ್ಲವೆಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ 2023-24ನೇ ಸಾಲಿನ ಚಳಿಗಾಲದ ರಜೆಯನ್ನು ನಿಗದಿತ ಅವಧಿಗೆ ಮುಂಚಿತವಾಗಿ ನೀಡಲಾಗಿದೆ. ಹೀಗಾಗಿ ಶಾಲೆಗಳು ಸಂಪೂರ್ಣವಾಗಿ ಮುಚ್ಚಿರುತ್ತವೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮನೆಯಲ್ಲಿ ಉಳಿದುಕೊಳ್ಳಬಹುದಾಗಿದೆ’’ ಎಂದು ದಿಲ್ಲಿ ಶಿಕ್ಷಣ ನಿರ್ದೇಶನಾಲಯದ ಬುಧವಾರ ಪ್ರಕಟಿಸಿದ ಸುತ್ತೋಲೆ ತಿಳಿಸಿದೆ.

ಇದಕ್ಕೂ ಮುನ್ನ ದಿಲ್ಲಿ ಸರಕಾರವು ವಾಯುಗುಣಮಟ್ಟ ಹದೆಗೆಟ್ಟ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಿಗೆ ನವೆಂಬರ್ 10ರವರೆಗೆ ರಜೆಯನ್ನು ಘೋಷಿಸಿತ್ತು.

ಈ ಮಧ್ಯೆ, ದಿಲ್ಲಿ ಪರಿಸರ ಸಚಿವ ಗೋಪಾಲ್ ರಾಯ್ ಅವರು ಬುಧವಾರ ಹೇಳಿಕೆಯೊಂದನ್ನು ನೀಡಿ, ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯವನ್ನು ನಿಯಂತ್ರಿಸಲು ಸಮ-ಬೆಸ ನಿಯಮದ ಜಾರಿಯ ಪರಿಣಾಮಕಾರಿತ್ವದ ಬಗ್ಗೆ ಸುಪ್ರೀಂಕೋರ್ಟ್ ಪರಾಮರ್ಶೆ ನಡೆಸಿದ್ದು, ತನ್ನ ಸರಕಾರವು ಅದನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಿದೆಯೆಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News