ಮಹಾರಾಷ್ಟ್ರ | ʼಇವಿಎಂಗಳನ್ನು ಹ್ಯಾಕ್ ಮಾಡಬಹುದುʼ ಎಂದ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ ಚುನಾವಣಾ ಆಯೋಗ
ಮುಂಬೈ: “ಇವಿಎಂಗಳನ್ನು ಹ್ಯಾಕ್ ಮಾಡಬಹುದು” ಎಂದು ಹೇಳಿದ್ದ ವ್ಯಕ್ತಿಯ ವಿರುದ್ಧ ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ಮುಂಬೈನ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ದಕ್ಷಿಣ ಮುಂಬೈನಲ್ಲಿರುವ ಸೈಬರ್ ಪೊಲೀಸ್ ಠಾಣೆಗೆ ಸೈಯದ್ ಶುಝಾ ಎಂಬಾತನ ವಿರುದ್ಧ ದೂರು ನೀಡಿದ್ದು, ಶುಝಾ ಮಾಡಿರುವ ಆರೋಪಗಳು ಸುಳ್ಳು ಮತ್ತು ಆಧಾರ ರಹಿತ ಎಂದು ಹೇಳಿದ್ದಾರೆ.
ಸೈಯದ್ ಶುಝಾ ವಿರುದ್ಧ ಭಾರತೀಯ ನ್ಯಾಯ ಸಂಹಿತ (ಬಿಎನ್ಎಸ್) ಮತ್ತು ಐಟಿ ಕಾಯ್ದೆಯಡಿ ದಕ್ಷಿಣ ಮುಂಬೈನ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಕ್ಕೆ ಶುಝಾ ವಿರುದ್ಧ 2019ರಲ್ಲಿ ಕೂಡ ಎಫ್ ಐಆರ್ ದಾಖಲಿಸಲಾಗಿದೆ. ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ದಿಲ್ಲಿ ಮತ್ತು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಭಾರತದಲ್ಲಿ ಇಂತಹ ವ್ಯಕ್ತಿ ಜೊತೆ ಸಂಪರ್ಕದಲ್ಲಿರುವ ಮತ್ತು ದುರುದ್ದೇಶಪೂರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರನ್ನು ಬಂಧಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಇವಿಎಂ ಅನ್ನು ಹ್ಯಾಕ್ ಮಾಡಬಹುದು, ನಾನು ಇವಿಎಂ ಹ್ಯಾಕ್ ಮಾಡಬಲ್ಲೆ ಎಂದು ಸೈಯದ್ ಶುಝಾ ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಾಕವಾಗಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಚುನಾವಣಾಧಿಕಾರಿಗಳು ಎಫ್ ಐಆರ್ ದಾಖಲಿಸಿದ್ದಾರೆ.