2019 ಲೋಕಸಭಾ ಚುನಾವಣೆಯಲ್ಲಿ EVM-ವಿವಿಪ್ಯಾಟ್ ಎಣಿಕೆಗಳ ನಡುವೆ ವ್ಯತ್ಯಾಸವಿತ್ತೇ ಎಂಬ ಪ್ರಶ್ನೆಗೆ ಇನ್ನೂ ಉತ್ತರಿಸದ ಸರ್ಕಾರ
ಹೊಸದಿಲ್ಲಿ: 2019 ಲೋಕಸಭಾ ಚುನಾವಣೆ ವೇಳೆ EVMಗಳು ಮತ್ತು ವಿವಿಪ್ಯಾಟ್‌ಗಳ ಎಣಿಕೆ ನಡುವೆ ಇರಬಹುದಾದ ಸಂಭಾವ್ಯ ವ್ಯತ್ಯಾಸಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದಾಗಿ ಸರ್ಕಾರ ಸಂಸತ್ತಿಗೆ ಹೇಳಿದ ನಾಲ್ಕು ವರ್ಷಗಳ ನಂತರವೂ ಈ ಕುರಿತು ಯಾವುದೇ ಉತ್ತರ ನೀಡಲಾಗಿಲ್ಲ ಎಂಬುದನ್ನು ಸರಕಾರಿ ಆಶ್ವಾಸನೆಗಳ ಸಂಸದೀಯ ಸಮಿತಿ ಕಂಡುಕೊಂಡಿದೆ. ಮತದಾನ ಪ್ರಕ್ರಿಯೆಯ ಸುರಕ್ಷತೆಗೆ ಇಂತಹ ವಿಚಾರ ಗುರುತಿಸಿ ತಿಳಿದುಕೊಳ್ಳುವುದು ಅಗತ್ಯವೆಂದೂ ಸಮಿತಿ ಹೇಳಿದೆ ಎಂದು indianexpress.com ವರದಿ ಮಾಡಿದೆ.
ಸಮಿತಿಯು ಗುರುವಾರ ಲೋಕಸಭೆಗೆ ಕಾನೂನು ಮತ್ತು ನ್ಯಾಯ ಸಚಿವಾಲಯಕ್ಕೆ ಸಂಬಂಧಿಸಿದ ಬಾಕಿ ಭರವಸೆಗಳ ವರದಿಯನ್ನು ಸಲ್ಲಿಸಿದೆ. ಜೂನ್ 26, 2019 ರಂದು “ಇವಿಎಂ ಮತ್ತು ವಿವಿಪ್ಯಾಟ್ ನಡುವಿನ ಎಣಿಕೆಯ ವ್ಯತ್ಯಾಸ” ಕುರಿತು ಪ್ರಶ್ನೆಯನ್ನು ಕೇಳಲಾಗಿತ್ತು ಹಾಗೂ 2019 ಲೋಕಸಭಾ ಚುನಾವಣೆಯಲ್ಲಿ ಎಣಿಕೆಯಲ್ಲಿ ಯಾವುದೇ ವ್ಯತ್ಯಾಸವಿತ್ತೇ ಎಂದು ಕೇಳಲಾಗಿತ್ತು ಹಾಗೂ ವ್ಯತ್ಯಾಸವಿದ್ದಲ್ಲಿ ಸರಿಪಡಿಸಲು ಯಾವ ಕ್ರಮಕೈಗೊಳ್ಳಲಾಗಿದೆ ಎಂದೂ ಕೇಳಲಾಗಿತ್ತು. ಮಾಹಿತಿ ಸಂಗ್ರಹಿಸಲಾಗುತ್ತಿದೆ ಮತ್ತು ಸದನದ ಮುಂದೆ ಇಡಲಾಗುವುದು ಎಂದು ಸರ್ಕಾರ ಆಗ ಭರವಸೆ ನೀಡಿತ್ತು.
ಬಿಜೆಪಿಯ ಮೀರತ್ ಸಂಸದ ರಾಜೇಂದ್ರ ಅಗ್ರವಾಲ್ ಅವರ ನೇತೃತ್ವದ ಸಂಸದೀಯ ಸಮಿತಿಗೆ ಕಾನೂನು ಸಚಿವಾಲಯ ತನ್ನ ಉತ್ತರದಲ್ಲಿ ತಾನು ಅಗತ್ಯ ಮಾಹಿತಿಯನ್ನು ಚುನಾವಣಾ ಆಯೋಗದಿಂದ ಮಾರ್ಚ್ 12, 2020 ರಂದು ಕೇಳಿದ್ದೆ ಹಾಗೂ ನಂತರ ಸೆಪ್ಟೆಂಬರ್ 3, 2020, ಫೆಬ್ರವರಿ 19, 2021, ಅಕ್ಟೋಬರ್ 7, 2021, ನವೆಂಬರ್ 26, 2021 ಹಾಗೂ ಜೂನ್ 3, 2022 ರಂದು ಜ್ಞಾಪನೆಗಳನ್ನು ಕಳುಹಿಸಿದ್ದೆ, ಆಯೋಗದಿಂದ ಮಾಹಿತಿ ಇನ್ನಷ್ಟೇ ದೊರಕಬೇಕಿದೆ ಎಂದು ಹೇಳಿತ್ತು.
ಇನ್ನೂ ಮಾಹಿತಿ ದೊರೆಯದೇ ಇರುವುದು ಸರ್ಕಾರ ಮತ್ತು ಆಯೋಗದ ನಡುವೆ ಸಮನ್ವಯದ ಕೊರತೆಯನ್ನು ಸೂಚಿಸುತ್ತಿದೆ, ಚುನಾವಣಾ ಪ್ರಕ್ರಿಯೆಯ ಕುರಿತಂತೆ ಮತದಾರರ ವಿಶ್ವಾಸ ಉಳಿಸಿಕೊಳ್ಳಲು ಈ ಪ್ರಶ್ನೆಗೆ ಉತ್ತರ ಅಗತ್ಯವಿದೆ, ಈ ವಿಚಾರಕ್ಕೆ ಆದ್ಯತೆ ನೀಡಿ ಆದಷ್ಟು ಬೇಗ ಆಯೋಗದಿಂದ ಉತ್ತರ ದೊರೆಯುವಂತೆ ಮಾಡಬೇಕೆಂದು ಸಮಿತಿಯು ಶಾಸಕಾಂಗ ಇಲಾಖೆಗೆ ಸೂಚಿಸಿದೆ.
2019 ಲೋಕಸಭಾ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಶೇ100ರಷ್ಟು ವಿವಿಪ್ಯಾಟ್‌ಗಳನ್ನು ಬಳಸಲಾಗಿತ್ತು.