ಈಡಿ ವಶ ಕಾನೂನುಬಾಹಿರ | ವಕ್ಫ್ ಪ್ರಕರಣದಲ್ಲಿ ಆಪ್ ಶಾಸಕ ಅಮಾನತುಲ್ಲಾ ಖಾನ್‌ಗೆ ಜಾಮೀನು ಮಂಜೂರು ಮಾಡಿದ ದಿಲ್ಲಿ ಕೋರ್ಟ್
ಹೊಸದಿಲ್ಲಿ : ದಿಲ್ಲಿ ವಕ್ಫ್ ಪ್ರಕರಣದಲ್ಲಿ ಆಪ್ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವ ಕ್ರಮ ಕಾನೂನುಬಾಹಿರ ಎಂದು ಗುರುವಾರ ಹೇಳಿರುವ ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯ, 1 ಲಕ್ಷ ರೂ.ಮೊತ್ತದ ಜಾಮೀನು ಬಾಂಡ್ ಹಾಗೂ ಶ್ಯೂರಿಟಿಯ ಮೇಲೆ ಅವರನ್ನು ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.
ಅಮಾನತುಲ್ಲಾ ಖಾನ್ ವಿರುದ್ಧ ಸಲ್ಲಿಸಿದ ದೋಷಾರೋಪ ಪಟ್ಟಿಯನ್ನು ಪರಿಗಣಿಸಲು ನಿರಾಕರಿಸಿದ ನ್ಯಾಯಾಲಯ, ಅಮಾನತುಲ್ಲಾ ಖಾನ್ ವಿರುದ್ಧ ಮುಂದುವರಿಯಲು ಸಾಕಷ್ಟು ಸಾಕ್ಷ್ಯಾಧಾರಗಳಿದ್ದರೂ, ಅದಕ್ಕೆ ಅಗತ್ಯವಾದ ಮಂಜೂರಾತಿಗಳನ್ನು ದೋಷಾರೋಪ ಪಟ್ಟಿ ಹೊಂದಿಲ್ಲ ಎಂದೂ ಅಭಿಪ್ರಾಯಪಟ್ಟಿತು.
ಅಮಾನತುಲ್ಲಾ ಖಾನ್ ವಿರುದ್ಧ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನು ಪರಿಗಣಿಸಬೇಕೆ ಎಂಬ ಕುರಿತು ನ್ಯಾಯಾಲಯ ತನ್ನ ಆದೇಶ ಹೊರಡಿಸುವಾಗ ಈ ಮಾತುಗಳನ್ನು ಉಲ್ಲೇಖಿಸಿದೆ.
ವಕ್ಫ್ ಪ್ರಕರಣದಲ್ಲಿ ಆರೋಪಿಯ ವಿರುದ್ಧ ದೋಷಾರೋಪ ಹೊರಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಬುಧವಾರ ಜಾರಿ ನಿರ್ದೇಶನಾಲಯ ವಾದ ಮಂಡಿಸಿದ ನಂತರ, ವಿಶೇಷ ನ್ಯಾಯಾಧೀಶ ಜಿತೇಂದ್ರ ಸಿಂಗ್ ತೀರ್ಪನ್ನು ಕಾಯ್ದಿರಿಸಿದ್ದರು.
ದಿಲ್ಲಿ ವಕ್ಫ್ ಮಂಡಳಿಯಲ್ಲಿನ ಭ್ರಷ್ಟಾಚಾರದ ಮೂಲಕ ಗಳಿಸಿದ ಹಣವನ್ನು ಅಮಾನತುಲ್ಲಾ ಖಾನ್ ಅಕ್ರಮವಾಗಿ ವರ್ಗಾಯಿಸಿದ್ದರು ಎಂದು ಅಕ್ಟೋಬರ್ 29ರಂದು ಜಾರಿ ನಿರ್ದೇಶನಾಲಯವು 110 ಪುಟಗಳ ಪೂರಕ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಆರೋಪ ಪಟ್ಟಿಯಲ್ಲಿ ಮರಿಯಮ್ ಸಿದ್ದೀಕಿ ಹೆಸರನ್ನೂ ಸೇರ್ಪಡೆ ಮಾಡಲಾಗಿದ್ದು, ಅವರನ್ನು ಈವರೆಗೆ ಆರೋಪಿ ಎಂದು ಜಾರಿ ನಿರ್ದೇಶನಾಲಯ ಬಂಧಿಸಿಲ್ಲ.