ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಪುತ್ರನಿಗೆ ಈಡಿ ಸಮನ್ಸ್

Update: 2023-10-26 07:39 GMT

ವೈಭವ್ ಗೆಹ್ಲೋಟ್ (Photo:X)

ಜೈಪುರ: ವಿದೇಶಿ ವಿನಿಮಯ ಕಾಯ್ದೆಯನ್ನು ಉಲ್ಲಂಘಿಸಿದ ಆರೋಪವಿರುವ ಪ್ರಕರಣದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಅವರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಜಾರಿಗೊಳಿಸಿದೆ ಎಂದು ಗುರುವಾರ ಅಧಿಕೃತ ಮೂಲಗಳು ತಿಳಿಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶುಕ್ರವಾರ ಜಾರಿ ನಿರ್ದೇಶನಾಲಯದ ಜೈಪುರ ಅಥವಾ ಹೊಸದಿಲ್ಲಿ ಕಚೇರಿಯೆದುರು ಹಾಜರಾಗುವಂತೆ ವೈಭವ್ ಗೆಹ್ಲೋಟ್ ಅವರಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಇತ್ತೀಚೆಗೆ ಟ್ರೈಟಾನ್ ಹೋಟೆಲ್ಸ್ ಆ್ಯಂಡ್ ರೆಸಾರ್ಟ್ಸ್ ಪ್ರೈ. ಲಿ, ವಾರ್ಧಾ ಎಂಟರ್ ಪ್ರೈಸಸ್ ಪ್ರೈ ಲಿ ಹಾಗೂ ಅವುಗಳ ನಿರ್ದೇಶಕರು ಮತ್ತು ಪ್ರವರ್ತಕರಾದ ಶಿವಶಂಕರ್ ಶರ್ಮ, ರತನ್ ಕಾಂತ್ ಶರ್ಮ ಹಾಗೂ ಮತ್ತಿತರರ ವಿರುದ್ಧ ನಡೆದಿದ್ದ ಜಾರಿ ನಿರ್ದೇಶನಾಲಯದ ದಾಳಿಗೆ ಸಂಬಂಧಿಸಿದಂತೆ ಈ ಸಮನ್ಸ್ ಅನ್ನು ಜಾರಿಗೊಳಿಸಲಾಗಿದೆ.

ಆಗಸ್ಟ್ ತಿಂಗಳಲ್ಲಿ ಈ ಸಮೂಹ ಮತ್ತು ಅದರ ಪ್ರವರ್ತಕರ ವಿರುದ್ಧ ಜೈಪುರ, ಉದಯ್ ಪುರ, ಮುಂಬೈ ಹಾಗೂ ದಿಲ್ಲಿಯಲ್ಲಿ ಜಾರಿ ನಿರ್ದೇಶನಾಲಯವು ಶೋಧನಾ ಕಾರ್ಯ ನಡೆಸಿತ್ತು.

ರತನ್ ಕಾಂತ್ ಶರ್ಮ ಅವರು ವೈಭವ್ ಗೆಹ್ಲೋಟ್ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದ್ದು, ಅವರಿಬ್ಬರೂ ಜಾರಿ ನಿರ್ದೇಶನಾಲಯದ ಕಣ್ಗಾವಲಿನಲ್ಲಿದ್ದಾರೆ. ವೈಭವ್ ಗೆಹ್ಲೋಟ್ ಅವರನ್ನು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ಪ್ರಶ್ನಿಸಿ, ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳುವ ನಿರೀಕ್ಷೆ ಇದೆ.

ಈ ಶೋಧ ಕಾರ್ಯಗಳ ನಂತರ ಲೆಕ್ಕಕ್ಕೆ ಸಿಗದ ರೂ. 1.2 ಕೋಟಿ ನಗದನ್ನು ಜಾರಿ ನಿರ್ದೇಶನಾಲಯವು ಮುಟ್ಟುಗೋಲು ಹಾಕಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News