ಏಮ್ಸ್ ವೈದ್ಯರೊಂದಿಗೆ ಸಮಾಲೋಚಿಸಲಾಗಿದೆ ಎಂದು ನ್ಯಾಯಾಲಯದಲ್ಲಿ ಈಡಿ ಸುಳ್ಳು ಹೇಳಿದೆ: ಆತಿಶಿ
ಹೊಸದಿಲ್ಲಿ: ಡಯಾಬಿಟೀಸ್ ರೋಗಿಯಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ಅಗತ್ಯವಿದೆಯೇ ಎಂಬ ಕುರಿತು ಏಮ್ಸ್ ನ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿರುವ ಕುರಿತು ಜಾರಿ ನಿರ್ದೇಶನಾಲಯ ನ್ಯಾಯಾಲಯದಲ್ಲಿ ಸುಳ್ಳು ಹೇಳಿದೆ ಎಂದು ದಿಲ್ಲಿ ಸಚಿವೆ ಆತಿಶಿ ಸೋಮವಾರ ಆರೋಪಿಸಿದ್ದಾರೆ.
ಪ್ರತಿ ದಿನ 15 ನಿಮಿಷ ವೈದ್ಯರೊಂದಿಗೆ ಸಮಾಲೋಚನೆಗೆ ಹಾಗೂ ಕಾರಾಗೃಹದಲ್ಲಿ ಇನ್ಸುಲಿನ್ ನೀಡುವಂತೆ ಕೋರಿ ಕೇಜ್ರಿವಾಲ್ ಅವರು ಶುಕ್ರವಾರ ಹೊಸ ಅರ್ಜಿ ಸಲ್ಲಿಸಿದ್ದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದೆ ಆತಿಶಿ, ಜಾರಿ ನಿರ್ದೇಶನಾಲಯ ನ್ಯಾಯಾಲಯದಲ್ಲಿ ಸುಳ್ಳು ಹೇಳಿದೆ. ಏಮ್ಸ್ನ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದು ಹೇಳಿದೆ. ಕೇಜ್ರಿವಾಲ್ ಅವರಿಗೆ ಇನ್ಸುಲಿನ್ ನ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ, ಕೇಜ್ರಿವಾಲ್ಗೆ ಡಯಟ್ ಚಾರ್ಟ್ ಅನ್ನು ಕೂಡ ಅವರು ರೂಪಿಸಿದ್ದಾರೆ ಅದು ಅದು ಹೇಳಿದೆ ಎಂದಿದ್ದಾರೆ.
‘‘ಆದರೆ, ಡಯಟ್ ಚಾರ್ಟ್ ಅನ್ನು ಡಯಾಬಿಟೀಸ್ ತಜ್ಞರು ರೂಪಿಸಿಲ್ಲ. ಬದಲಾಗಿ ಡಯಟೀಷಿಯನ್ ರೂಪಿಸಿದ್ದಾರೆ. ಡಯಟೀಷಿಯನ್ ಎಂಬಿಬಿಎಸ್ ಪದವಿ ಪಡೆದ ವೈದ್ಯರಲ್ಲ. ಇದರ ಆಧಾರದಲ್ಲಿ ಕೇಜ್ರಿವಾಲ್ ಗೆ ಇನ್ಸುಲಿನ್ ಅಗತ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯದಲ್ಲಿ ಹೇಳುತ್ತಿದೆ’’ ಎಂದು ಅವರು ಹೇಳಿದರು.