ಶಿವಾಜಿ ಕುರಿತ ಪೋಸ್ಟ್ ನಲ್ಲಿ ‘ಶ್ರದ್ಧಾಂಜಲಿ’ ಪದ ಬಳಿಸಿದ ರಾಹುಲ್ ಗಾಂಧಿ ವಿರುದ್ಧ ಏಕನಾಥ್ ಶಿಂದೆ ವಾಗ್ದಾಳಿ; ಕ್ಷಮೆಯಾಚನೆಗೆ ಆಗ್ರಹ

Update: 2025-02-20 12:28 IST
Photo of Eknath Shinde

ಏಕನಾಥ್ ಶಿಂಧೆ (Photo: PTI)

  • whatsapp icon

ಮುಂಬೈ: ಶಿವಾಜಿ ಜಯಂತಿ ಪ್ರಯುಕ್ತ ತಾವು ಮಾಡಿರುವ ಪೋಸ್ಟ್ ನಲ್ಲಿ ‘ಅದರಾಂಜಲಿ’ (ಗೌರವಾರ್ಪಣೆ) ಬದಲು ತಪ್ಪಾಗಿ ‘ಶ್ರದ್ಧಾಂಜಲಿ’ (ಸಂತಾಪ) ಪದ ಬಳಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಇದು ಪೂಜ್ಯನೀಯ ಮರಾಠ ಸೇನಾನಿ ಶಿವಾಜಿ ಹಾಗೂ ಅವರ ಪರಂಪರೆಗೆ ಎಸಗಿರುವ ಅವಮಾನವಾಗಿದ್ದು, ರಾಹುಲ್ ಗಾಂಧಿ ಈ ಕುರಿತು ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್ ಶಿಂದೆ, “ಇಂದು ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನಾಚರಣೆಯಾಗಿದ್ದು, ಅದರ ಪ್ರಯುಕ್ತ ಮಹಾರಾಷ್ಟ್ರ ಹಾಗೂ ದೇಶದೆಲ್ಲೆಡೆ ಅತ್ಯುತ್ಸಾಹದಿಂದ ಶಿವ ಜಯಂತಿಯನ್ನು ಆಚರಿಸಲಾಗುತ್ತಿದೆ. ಆದರೆ, ರಾಹುಲ್ ಗಾಂಧಿಯವರ ಹೇಳಿಕೆಯು ಅತ್ಯಂತ ಅಪಮಾನಕಾರಿಯಾಗಿದೆ. ಇದು ಕೇವಲ ಛತ್ರಪತಿ ಶಿವಾಜಿ ಮಹಾರಾಜರಿಗೆ ಆಗಿರುವ ಅವಮಾನ ಮಾತ್ರವಲ್ಲ; ಅವರ ಕೋಟ್ಯಂತರ ಆರಾಧಕರು ಹಾಗೂ ಮಹಾರಾಷ್ಟ್ರದ ಜನತೆಗೆ ಆಗಿರುವ ಅವಮಾನವಾಗಿದೆ. ಅವರು ಸಾವರ್ಕರ್ ರನ್ನೂ ಹಲವಾರು ಬಾರಿ ಅವಮಾನಿಸಿದ್ದರು. ಅವರು ತಮ್ಮ ತಪ್ಪಿಗಾಗಿ ಕ್ಷಮೆ ಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.

ಇಂದು ಬೆಳಗ್ಗೆ ಎಕ್ಸ್ ನಲ್ಲಿ ಗೌರವ ನಮನವನ್ನು ಪೋಸ್ಟ್ ಮಾಡಿದ್ದ ರಾಹುಲ್ ಗಾಂಧಿ, “ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನಾಚರಣೆಯ ಅಂಗವಾಗಿ ನನ್ನ ಗೌರವಪೂರ್ವಕ ನಮನಗಳು ಹಾಗೂ ಹೃದಯಪೂರ್ವಕ ಶ್ರದ್ಧಾಂಜಲಿಗಳು. ಅವರು ತಮ್ಮ ಧೈರ್ಯ ಮತ್ತು ಶೌರ್ಯದಿಂದ ನಾವು ನಿರ್ಭೀತವಾಗಿ ಹಾಗೂ ಸಂಪೂರ್ಣ ಅರ್ಪಣಾ ಮನೋಭಾವದೊಂದಿಗೆ ನಮ್ಮ ಧ್ವನಿಯೆತ್ತಲು ಪ್ರೇರಣೆಯಾಗಿದ್ದಾರೆ. ಅವರ ಜೀವನವೆಂದಿಗೂ ನಮ್ಮೆಲ್ಲರ ಪಾಲಿಗೆ ಪ್ರೇರಣೆಯ ಮೂಲವಾಗಿರಲಿದೆ” ಎಂದು ಬರೆದುಕೊಂಡಿದ್ದರು.

ಸಾಂಪ್ರದಾಯಿಕವಾಗಿ ಚಾರಿತ್ರಿಕ ವ್ಯಕ್ತಿಗಳಿಗೆ ಬಳಸಲಾಗುವ ಅದರಾಂಜಲಿ ಪದದ ಬದಲು ಮೃತಪಟ್ಟವರಿಗೆ ಬಳಸಲಾಗುವ ಶ್ರದ್ಧಾಂಜಲಿ ಪದವನ್ನು ರಾಹುಲ್ ಗಾಂಧಿ ತಮ್ಮ ಪೋಸ್ಟ್ ನಲ್ಲಿ ಬಳಸಿರುವುದರಿಂದ ಈ ವಿವಾದ ಭುಗಿಲೆದ್ದಿದೆ. ಈ ಪೋಸ್ಟ್ ಏಕನಾಥ್ ಶಿಂದೆ ಹಾಗೂ ಬಿಜೆಪಿಯ ಟೀಕೆಗೆ ಗುರಿಯಾಗಿದ್ದು, ರಾಹುಲ್ ಗಾಂಧಿ ಅಸೂಕ್ಷ್ಮ ವ್ಯಕ್ತಿಯಾಗಿದ್ದಾರೆ ಎಂದು ಆರೋಪಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News