ಮಹಾರಾಷ್ಟ್ರ | ಉಪಮುಖ್ಯಮಂತ್ರಿ ಹುದ್ದೆಗಿನ್ನೂ ಸಹಮತ ವ್ಯಕ್ತಪಡಿಸದ ಏಕನಾಥ್ ಶಿಂದೆ

Update: 2024-12-05 11:28 IST
Photo of Devendra Fadnavis and Eknath Shinde

Photo credit: PTI

  • whatsapp icon

ಮುಂಬೈ: ಬಿಜೆಪಿಯ ದೇವೇಂದ್ರ ಫಡ್ನವಿಸ್ ನೇತೃತ್ವದ ನೂತನ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಒಪ್ಪಿಕೊಳ್ಳುವ ಕುರಿತು ನಿರ್ಗಮಿತ ಮುಖ್ಯಮಂತ್ರಿ ಏಕನಾಥ್ ಶಿಂದೆ ಇನ್ನೂ ತಮ್ಮ ನಿರ್ಧಾರವನ್ನು ಮಹಾಯುತಿ ಮೈತ್ರಿಕೂಟದ ನಾಯಕರಿಗೆ ತಿಳಿಸಿಲ್ಲ ಎಂದು ವರದಿಯಾಗಿದೆ.

ಆದರೆ, ತಾನು ನೂತನ ಸರಕಾರದ ಭಾಗವಾಗಲಿರುವೆ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಳ್ಳಲಿರುವೆ ಎಂದು ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಮೂರು ಬಾರಿ ಏಕನಾಥ್ ಶಿಂದೆಯನ್ನು ಖಾಸಗಿಯಾಗಿ ಭೇಟಿ ಮಾಡಿರುವ ದೇವೇಂದ್ರ ಫಡ್ನವಿಸ್, ನೂತನ ಸರಕಾರದಲ್ಲಿ ಭಾಗಿಯಾಗುವಂತೆ ಅವರಿಗೆ ಮನವಿ ಮಾಡಿದ್ದಾರೆ. ಏಕನಾಥ್ ಶಿಂದೆ ಉಪ ಮುಖ್ಯಮಂತ್ರಿಯಾಗಬೇಕು ಎಂದು ಶಿವಸೇನೆ ನಾಯಕರೂ ಒತ್ತಾಯಿಸಿದ್ದಾರೆ.

ಆದರೆ, ಗೃಹ ಹಾಗೂ ನಗರಾಭಿವೃದ್ಧಿಯಂತಹ ಪ್ರಮುಖ ಖಾತೆಗಳಿಗೆ ಏಕನಾಥ್ ಶಿಂದೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.

ಗುರುವಾರ ಮಧ್ಯಾಹ್ನದ ವೇಳೆಗೆ ಸರಕಾರದಲ್ಲಿ ಸೇರ್ಪಡೆಯಾಗುವ ಕುರಿತು ಏಕನಾಥ್ ಶಿಂದೆ ತಮ್ಮ ನಿರ್ಧಾರ ಪ್ರಕಟಿಸಬಹುದು ಎಂದು ಶಿವಸೇನೆ ಮೂಲಗಳು ತಿಳಿಸಿವೆ. ಮಹಾಯುತಿ ನಾಯಕರೂ ಕೂಡಾ ಇದೇ ಭರವಸೆ ಹೊಂದಿದ್ದಾರೆ.

ಇಂದು ಸಂಜೆ 5.30ಕ್ಕೆ ನೂತನ ಸರಕಾರದ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಈ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

ಬುಧವಾರ ಏಕನಾಥ್ ಶಿಂದೆ ಹಾಗೂ ಅಜಿತ್ ಪವಾರ್ ರೊಂದಿಗೆ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್, ಸರಕಾರ ರಚನೆಗೆ ಹಕ್ಕು ಮಂಡಿಸಿದರು. ದೇವೇಂದ್ರ ಫಡ್ನವಿಸ್ ರನ್ನು ಮುಖ್ಯಮಂತ್ರಿಯಾಗಿ ನೇಮಿಸಿಲು ಏಕನಾಥ್ ಶಿಂದೆ ಮತ್ತು ಅಜಿತ್ ಪವಾರ್ ಇಬ್ಬರೂ ತಮ್ಮ ಬೆಂಬಲ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News